ಹೊನ್ನಾವರ: ಬೆಂಗಳೂರಿನಿಂದ ಭಟ್ಕಳದತ್ತ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಭೀಕರ ರಸ್ತೆ ಅಪಘಾತಕ್ಕೊಳಗಾಗಿ ಪಲ್ಟಿಯಾದ ದುರ್ಘಟನೆ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿಯಂತ್ರಣ ತಪ್ಪಿದ ಕಾರೊಂದು ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದೆ. ಗಾಯಾಳುಗಳನ್ನು 108 ಹಾಗೂ ಖಾಸಗಿ ಆಂಬುಲೆನ್ಸ್‌ಗಳ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತ ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ ? 12 ಗಂಟೆ ಹೋರಾಡಿ ಆ್ಯಂಬುಲೆನ್ಸ್‌ನಲ್ಲೇ ಅಂತ್ಯ ಕಂಡ ಬಡ ಕಾರ್ಮಿಕ; ಇದೇನಾ ಆರೋಗ್ಯ ವ್ಯವಸ್ಥೆಯ ನಿಜಮುಖ?
ಗೇರುಸೊಪ್ಪ ಘಟ್ಟ ಪ್ರದೇಶವು ಹೊನ್ನಾವರದಿಂದ 40 ಕಿ.ಮೀ. ಹಾಗೂ ಸಿದ್ದಾಪುರದಿಂದ 30 ಕಿ.ಮೀ. ದೂರದಲ್ಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು ಕೊರತೆಯಿರುವುದರಿಂದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಸಿಗದೆ ಪರಿದಾಡುವಂತೆ ಆಯಿತು.
ಅಪಘಾತದಿಂದ ಹೊನ್ನಾವರ–ಬೆಂಗಳೂರು ಹೆದ್ದಾರಿ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಈಗ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





