ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಬರುವ ಆಕರ್ಷಕ ಜಾಹೀರಾತುಗಳನ್ನು ನಂಬಿ ಸಾರ್ವಜನಿಕರು ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಆನ್‌ಲೈನ್ ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17,10,921 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಹೊನ್ನಾವರ ತಾಲ್ಲೂಕಿನ ದಿವ್ಯಾ ಸುಕ್ರು ಗೌಡ ಎಂಬ ಮಹಿಳೆ ನವೆಂಬರ್ 27, 2025 ರಂದು ಇನ್‌ಸ್ಟಾಗ್ರಾಂನಲ್ಲಿ ‘Online Part Time Job’ ಎಂಬ ಜಾಹೀರಾತನ್ನು ನೋಡಿ, ಅಲ್ಲಿ ನೀಡಲಾಗಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಇದು Konal Poddar ಎಂಬುವವರ ವಾಟ್ಸಾಪ್ ಸಂಖ್ಯೆಗೆ ಇವರನ್ನು ಸಂಪರ್ಕಿಸುವಂತೆ ಮಾಡಿದೆ.
ಕೆಲಸದ ಬಗ್ಗೆ ಆಸಕ್ತಿ ತೋರಿದ ಸಂತ್ರಸ್ತರಿಗೆ ಟೆಲಿಗ್ರಾಂ ಐಡಿ ಮತ್ತು ವೆಬ್‌ಸೈಟ್ ಲಿಂಕ್‌ಗಳನ್ನು ನೀಡಿ ಪ್ರಾಡಕ್ಟ್ ರೇಟಿಂಗ್ ಮತ್ತು ರಿವ್ಯೂ ನೀಡುವ ಕೆಲಸವನ್ನು ವಹಿಸಲಾಗಿದೆ. ಆರಂಭದಲ್ಲಿ ಸಂತ್ರಸ್ತರ ವಿಶ್ವಾಸ ಗಳಿಸಲು ವಂಚಕರು ಸಣ್ಣ ಮೊತ್ತದ ಹೂಡಿಕೆ ಮಾಡಿಸಿದ್ದಾರೆ. ಮೊದಲು 800 ರೂ. ಹೂಡಿಕೆ ಮಾಡಿದಾಗ 1,000 ರೂ.ಗಳನ್ನು ಹಾಗೂ 3,000 ರೂ. ಹೂಡಿಕೆ ಮಾಡಿದಾಗ 3,900 ರೂ.ಗಳನ್ನು ಸಂತ್ರಸ್ತರ ಖಾತೆಗೆ ಜಮಾ ಮಾಡುವ ಮೂಲಕ ನಂಬಿಕೆ ಹುಟ್ಟಿಸಿ.
ಹೆಚ್ಚಿನ ಲಾಭದ ಆಸೆ ತೋರಿಸಲು ‘Glory Community’ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಲಾಗಿದ್ದು, ಅಲ್ಲಿ ಧರಂ ಚೌಧರಿ, ರೆಯಾನ್ಶಿ ದೇಶ್ಮುಖ್ ಮತ್ತು ವಿಕ್ರಮ್ ಸಿಂಗ್ ಎಂಬುವವರು ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚಿನ ಲಾಭದ ಆಸೆಗೆ ಬಿದ್ದ ಸಂತ್ರಸ್ತರು, ನವೆಂಬರ್ 29 ರಿಂದ ಡಿಸೆಂಬರ್ 20 ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 17,10,921 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಆದರೆ ಹಣ ಪಾವತಿಸಿದ ನಂತರ ಯಾವುದೇ ಲಾಭಾಂಶವಾಗಲಿ ಅಥವಾ ಹೂಡಿಕೆ ಮಾಡಿದ ಅಸಲು ಹಣವಾಗಲಿ ವಾಪಸ್ ಬಂದಿಲ್ಲ. ತಾವು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಸಂತ್ರಸ್ತರು ಕಾರವಾರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





