ಹೊನ್ನಾವರ: ತಾಲೂಕಿನ ಅಳ್ಳಂಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಉರುಳಿ ಬಿದ್ದಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಘಟನೆಯ ವಿವರ: ಹೊನ್ನಾವರದಿಂದ ಸಾಗರ ಮಾರ್ಗವಾಗಿ ಬೆಂಗಳೂರಿನತ್ತ ಸಾಗುತ್ತಿದ್ದ ಶ್ರೀಕುಮಾರ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್, ಮಾರ್ಚ್ 8ರ ರಾತ್ರಿ ಅಪಘಾತಕ್ಕೀಡಾಗಿದೆ. ಗೇರುಸೊಪ್ಪ ಸಮೀಪದ ಅಳ್ಳಂಕಿ ಫ್ಯಾಕ್ಟರಿ ಕ್ರಾಸ್ ಬಳಿಯ ತಿರುವಿನಲ್ಲಿ ಚಲಿಸುತ್ತಿದ್ದಾಗ, ಎದುರಿನಿಂದ ಬಂದ ಸ್ಕೂಟಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ.
ಈ ವೇಳೆ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ಚಾಲಕನ ಹತೋಟಿ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡಬಾಳ ನಿವಾಸಿಗಳಾದ ಸುರೇಶ ಕನ್ಯಾ ಗೌಡ, ಆಶಾ ಸುರೇಶ ಗೌಡ ಹಾಗೂ ಎರಡು ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದು, ಉಳಿದ 20ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ರಾಜ್ಯದ ಜಿಎಸ್ಟಿ ಪಾಲು ಕೊಡಿಸಲು ಬಿಜೆಪಿ ನಾಯಕರು ತಮ್ಮ ತಾಕತ್ತು ತೋರಿಸಲಿ: ಭೀಮಣ್ಣ ನಾಯ್ಕ ವಾಗ್ದಾಳಿ
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಧಾವಿಸಿ ಬಂದು, ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯುವ ಮೂಲಕ ಮಾನವೀಯತೆ ಮೆರೆದರು. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಕೆಲಕಾಲ ವ್ಯತ್ಯಯಗೊಂಡಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ವಾಹನವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





