ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಗುತ್ತಿಗೆದಾರ ಮೋಹನ್ ಚವ್ಹಾಣ್ ಎಂಬುವರನ್ನು ಅಪಹರಣ ಮಾಡಿದ್ದ ಹಿನ್ನೆಲೆಯಲ್ಲಿ 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವಳಿ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಉಪ ಪೊಲೀಸ್ ಠಾಣೆಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ತಿಳಿಸಿದ್ದಾರೆ.
ಕಳೆದ ಬುಧವಾರ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಮೋಹನ್ ಚವ್ಹಾಣ್ ಎಂಬವರನ್ನು ಬಸಪ್ಪ ದಳವಾಯಿ ಸೇರಿದಂತೆ 15 ರಿಂದ 20 ಜನರು ಕೂಡಿಕೊಂಡು ಬ್ರೌನ್ ಕಲರಿನ ರಿನಾಯಲ್ಪ ಟ್ರೈಬರ್ ಕಂಪನಿಯ ನಂಬರ್ ಪ್ಲೇಟ್ ಇರದೇ ಇದ್ದ ಕಾರಿನಲ್ಲಿ ಹಾಗೂ ಒಂದು ಕ್ರೂಸರ್ ವಾಹನದಲ್ಲಿ ಬಂದು ಮಾರಕಾಸ್ತ್ರಗಳನ್ನು ತೋರಿಸಿ, ಎಲ್ಲರೂ ಅರವಿಂದ ಚವ್ಹಾಣ ಆಫಿಸಿನೊಳಗೆ ಅತಿಕ್ರಮ ಪ್ರವೇಶ ಮಾಡಿ ಆಫೀಸ್ ಸಿಬ್ಬಂದಿಗೆ ಅಶ್ಲೀಲವಾಗಿ ಬೈದು, ಹಲ್ಲೆ ಮಾಡಿ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದರ ಬಗ್ಗೆ ಮೋಹನ್ ಸಹೋದರ ಅರವಿಂದ್ ಚವ್ಹಾಣ್ ಎಂಬವರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದು ಇತ್ತು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಹುಬ್ಬಳ್ಳಿಗೆ ಕಾಲಿಟ್ಟ ಯುವ ಪರಿವರ್ತನೆ ಯಾತ್ರೆ
ನಗರದ ವಿಮಾನ ನಿಲ್ದಾಣದ ಬಳಿ ಕಾರನ್ನು ತಡೆಯಲು ಯತ್ನಿಸಿದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು. ನಂತರ ಆರೋಪಿಗಳನ್ನು ಬೆನ್ನತ್ತಿದ ಪೊಲೀಸರು ಧಾರವಾಡದ ಕೆ.ಸಿ.ಪಾರ್ಕ್ ಬಳಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ ಮೋಹನ್ ಚವ್ಹಾಣ್ನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಬಳಿ ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರದ ಕಾರಣಕ್ಕಾಗಿ ಈ ಅಪಹರಣ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಘಟನೆ ಕುರಿತಂತೆ ಇನ್ನೂ ಹತ್ತಕ್ಕೂ ಅಧಿಕ ಜನರು ಭಾಗಿಯಾಗಿರುವ ಶಂಕೆ ಇದ್ದು, ಆದಷ್ಟು ಬೇಗ ಅವರನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದರು.





