ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾದ ಹುಬ್ಬಳ್ಳಿಯ ದಲಿತ ಕುಟುಂಬದ ಮೇಲಿನ ದೌರ್ಜನ್ಯ ಮತ್ತು ಗರ್ಭಿಣಿ ಯುವತಿಯ ಹತ್ಯೆ ಪ್ರಕರಣದ ಸಂತ್ರಸ್ತ ವಿವೇಕಾನಂದ ದೊಡ್ಡಮನಿ ಕುಟುಂಬ ಇನಾಂವೀರಾಪೂರ ಗ್ರಾಮಕ್ಕೆ ಮರಳಿದೆ. ನಿನ್ನೆ ಸಂಜೆ (ಡಿ.29) ಧಾರವಾಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಇನಾಂವೀರಾಪೂರ ಗ್ರಾಮದಲ್ಲಿ ಸರ್ವ ಜನಾಂಗದ ಶಾಂತಿ ಸಭೆ ನಡೆಸಿ ಕುಟುಂಬವನ್ನು ಸಂತೈಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಇನಾಂವೀರಾಪೂರ ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರು, ಇದೊಂದು ಆಕಸ್ಮಿಕ ಘಟನೆ, ನಾವು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬ, ಜಂಗಮ, ವೀರಶೈವ ಲಿಂಗಾಯತ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವದಿಂದ ಒಗ್ಗಟ್ಟಾಗಿ ಬಾಳುತ್ತಾ ಬಂದಿದ್ದೇವೆ. ಮುಂದೇಯೂ ಅದೇ ರೀತಿ ಇರುತ್ತೇವೆ. ದೊಡ್ಡಮನಿ ಕುಟುಂಬದವರಿಗೆ ಯಾವುದೇ ತಾರತಮ್ಯ ಮಾಡದೇ ಮೊದಲಿನಂತೆ ಪರಸ್ಪರರು ಇರುತ್ತೇವೆ. ಇದು ಒಂದು ಕುಟುಂಬದ ಸಮಸ್ಯೆ. ಊರಿನ ಸಮಸ್ಯೆಯಲ್ಲ. ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಕ್ರಮವಾಗಲಿ. ಇದನ್ನು ಇಲ್ಲಿಗೆ ಮರೆತು ಎಲ್ಲರೂ ಒಂದಾಗಿ ಗ್ರಾಮದಲ್ಲಿ ವಾಸಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.
ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನಾವು ನಿರಂತರವಾಗಿ ಒತ್ತಡ ಹೇರುತ್ತೇವೆ. ಇದಲ್ಲದೆ, ಸ್ಥಳೀಯವಾಗಿ ಅಥವಾ ವೈಯಕ್ತಿಕವಾಗಿ ನಮ್ಮ ಕಡೆಯಿಂದ ಯಾವುದೇ ನೂನ್ಯತೆಗಳಿದ್ದರೆ ಅಥವಾ ವಿಶೇಷ ವ್ಯವಸ್ಥೆಗಳ ಅಗತ್ಯವಿದ್ದರೆ ಕೂಡಲೇ ನಮಗೆ ತಿಳಿಸಿ. ನಾವು ನಿಮ್ಮ ನೆರವಿಗೆ ಸದಾ ಸಿದ್ಧರಿದ್ದೇವೆ, ಆರೋಪಿಗಳಿಗೆ ಒಂದು ವರ್ಷದೊಳಗಾಗಿ ಕಠಿಣ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಿಳಿಸಿದರು.


ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, “ಕೊಲೆ ಮತ್ತು ದೌರ್ಜನ್ಯ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು, ಆರ್ಥಿಕ ಸಹಾಯ ಹಾಗೂ ಜೀವನೋಪಾಯದ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಿ, ಕ್ರಮವಹಿಸಲಿದೆ. ಪ್ರಕರಣದ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಗ್ರಾಮಸ್ಥರ, ಮುಖಂಡರ, ವಿವಿಧ ಸಮುದಾಯ ಪ್ರತಿನಿಧಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಗೆ ಪರಿಶಿಷ್ಟ ಜಾತಿಯ ಪ್ರಮುಖ ಮುಖಂಡರನ್ನು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸರಕಾರ ಮತ್ತು ಜಿಲ್ಲಾಡಳಿತವು ಸಂತ್ರಸ್ತ ಕುಟುಂಬಕ್ಕೆ ಯಾವುದೇ ರೀತಿಯ ಭಯ ಅಥವಾ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಂತ್ರಸ್ತ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಾರದು ಎಂಬುದು ನಮ್ಮ ಆದ್ಯತೆ. ಕಾನೂನು ಕ್ರಮದ ಜೊತೆಗೆ ಅವರ ಕುಟುಂಬಕ್ಕೆ ರಕ್ಷಣೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಗ್ರಾಮಸ್ಥರು, ದಲಿತ ಕುಟುಂಬಗಳು, ಜನರು ಹೆದರುವ ಅಗತ್ಯವಿಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತ ನಿಮ್ಮೊಂದಿಗಿದೆ ಇದೆ ಎಂದು ಧೈರ್ಯ ತುಂಬಬೇಕಿದೆ ಅದಕೆ ನಾವು ನೀವುಗಳೆಲ್ಲ ಸೇರಿಕೊಂಡು ಕುಟುಂಬದವರ ಪರವಾಗಿ ಮತ್ತು ಗ್ರಾಮದ ಪರವಾಗಿ ನಿಲ್ಲಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಎಲ್ಲರೂ ನೊಂದ ಕುಟುಂಬಕ್ಕೆ ಭರವಸೆ ನೀಡಬೇಕಿದೆ ಎಂದು ಹೇಳಿದರು.
ಘಟನೆಯ ಆಘಾತದಿಂದ ಹೊರಬರಲಾಗದ ಸಂತ್ರಸ್ತ ಕುಟುಂಬ ಮತ್ತು ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ಮೂಡಿಸಲು ನಾವೆಲ್ಲರೂ ಮುಂದಾಗಬೇಕಿದೆ. ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ತಕ್ಷಣ ಸ್ಪಂದಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಮನೆ ವ್ಯವಸ್ಥೆಯನ್ನು ಮಾಡಿಕೊಡುವುದು, ಕುಟುಂಬದ ಜೀವನೋಪಾಯಕ್ಕಾಗಿ ಸರ್ಕಾರಿ ಕೆಲಸ ಅಥವಾ ಸೂಕ್ತ ಉದ್ಯೋಗ ನೀಡುವ ಬಗ್ಗೆ ಸರ್ಕಾರ ನೋಡಿಕೊಳ್ಳುತ್ತದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಹಂತ-ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಒಂದೊಂದೇ ಹೆಜ್ಜೆಯಲ್ಲಿ ನೆರವು ನೀಡಲಿದೆ. ಇದರಿಂದ ಅವರು ಮತ್ತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಅವರ ಮುಂದಿನ ಜೀವನೋಪಾಯಕ್ಕಾಗಿ ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತವೇ ಮುತುವರ್ಜಿ ವಹಿಸಿ ಮಾಡಿಕೊಡಲಿದೆ. ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬದವರು ಮತ್ತು ಗ್ರಾಮದ ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಮತ್ತು ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಲು ಗ್ರಾಮಸ್ಥರ ಬೆಂಬಲ ಅತ್ಯಗತ್ಯ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಹಲ್ಲೆಗೊಳಗಾದ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ಮತ್ತು ರಕ್ಷಣೆ ನೀಡಲಿದೆ. ಕುಟುಂಬವು ಆಘಾತಕ್ಕೆ ಒಳಗಾಗಿದೆ. ಈ ದುರಂತದ ನಂತರ ಅವರು ಮತ್ತೆ ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯವಿದೆ. ಈ ಕಷ್ಟದ ಸಮಯದಲ್ಲಿ ಜಿಲ್ಲಾಡಳಿತ, ಪೊಲೀಸ ಇಲಾಖೆಯು ಅವರ ಬೆನ್ನಿಗೆ ನಿಲ್ಲಲಿದೆ. ಸಂತ್ರಸ್ತ ಕುಟುಂಬಕ್ಕೆ ಯಾವುದೇ ರೀತಿಯ ಪ್ರಾಣಭಯ ಅಥವಾ ಆತಂಕ ಎದುರಾಗದಂತೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಪೊಲೀಸ್ ಬಿಗಿ ಬಂದೋಬಸ್ತನ್ನು ಒದಗಿಸಲಾಗುವುದು. ನೊಂದ ಕುಡುಂಬದವರು ಸಮಾಜದಲ್ಲಿ ಧೈರ್ಯವಾಗಿ ಬದುಕಲು ಬೇಕಾದ ಪೂರಕ ವಾತಾವರಣವನ್ನು ನಾವು ನಿರ್ಮಿಸುತ್ತೇವೆ” ಎಂದು ಭರವಸೆ ನೀಡಿದರು.
ಜಿಲ್ಲಾಡಳಿತವು ಈ ಕುಟುಂಬಕ್ಕೆ ಅಗತ್ಯವಿರುವ ಸಾಮಾಜಿಕ ಮತ್ತು ಆರ್ಥಿಕ ನೆರವುಗಳನ್ನು ಒದಗಿಸುವ ಬಗ್ಗೆಯೂ ಗಮನ ಹರಿಸಲಿದೆ. ಪ್ರಕರಣದ ತನಿಖೆಯು ಚುರುಕಿನಿಂದ ಸಾಗುತ್ತಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಇಲಾಖೆ ಬದ್ಧವಾಗಿದೆ ಎಂದು ಹೇಳಿದರು .
ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ ಖಾನಾಪುರ, ಪ್ರೇಮನಾಥ್ ಚಿಕ್ಕತುಂಬಳ, ಪರಮೇಶ್ ಕಾಳೆ, ಚಂದ್ರಶೇಖರ್. ಬಿ. ಯಾದಗೇರ, ಶ್ರೀಧರ್ ಕಂದಗಲ್ಲ, ಕೆಂಚಪ್ಪ ಮಲ್ಲಮ್ಮನವರ ಹಾಗೂ ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ, ಗುರುಸಿದ್ದಯ್ಯ ಹಿರೇಮಠ, ಲಲೀತಾ ಮಡ್ಲಿ, ಬಸವರಾಜ ವಾಲೀಕಾರ, ರೇಣುಕಾ ಹೂಯಿಲಗೋಳ, ಗ್ರಾಮ ಪಂಚಾಯತ ಸದಸ್ಯ ಶಿವಾನಂದ ಮಣಕವಾಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಣಮಂತ ವಾಲೀಕಾರ, ಗ್ರಾಮ ಪಂಚಾಯತ ಸದಸ್ಯ ಶಿವಾನಂದ ಮೇಕಾರ, ರಮೇಶ ಮಾದರ, ಯಲ್ಲಪ್ಪ ವಾಲಿಕಾರ, ಬಸವರಾಜ್ ವಾಲಿಕಾರ, ರಮೇಶ್ ಮಾದರ ಮಾತನಾಡಿದರು.
ಇದನ್ನೂ ಓದಿ: ಧಾರವಾಡ | ಮರ್ಯಾದೆಗೇಡು ಹತ್ಯೆ ನಿಷೇಧ ಕಾನೂನು ಜಾರಿಗೆ ಜನಪರ ಸಂಘಟನೆಗಳ ಒತ್ತಾಯ
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಬೆಳಗಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಸವ್ವ ಹೂಲಗೇರಿ, ಉಪ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಮುಕ್ತೆದಾರ್, ತಹಶಿಲ್ದಾರ ಜೆ.ಬಿ.ಮಜ್ಜಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಶರಿ ರಾಮಚಂದ್ರ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರಯದರ್ಶಿನಿ ಹಿರೇಮಠ, ಇನಸ್ಪೆಕ್ಟರ್ ವೀರಭದ್ರಪ್ಪ ಕಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಜಾಗೃತಿ ಸದಸ್ಯರು ಮತ್ತು ದಲಿತ ಸಂಘಟನೆಗಳ ಸದಸ್ಯರು, ಗ್ರಾಮದ ಸಾರ್ವಜನಿಕರು, ಮಹಿಳೆಯರು, ಯುವಕರು ಇದ್ದರು.
ಕಳೆದ ಭಾನುವಾರ ದೌರ್ಜನ್ಯಕ್ಕೆ ಒಳಗಾಗಿ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇನಾಂವೀರಾಪೂರ ಗ್ರಾಮದ ವಿವೇಕಾನಂದ ದೊಡ್ಡಮನಿ ಕುಟುಂಬಸ್ಥರನ್ನು ಗ್ರಾಮದ ಶಾಂತಿ ಸಭೆ ನಂತರ, ಸ್ವತಃ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಗ್ರಾಮದ ಪ್ರಮುಖರೊಂದಿಗೆ ಸ್ವಾಗತಿಸಿ, ಸ್ಥೈರ್ಯ, ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಗಳ ಪ್ರಮುಖರು, ಗ್ರಾಮ ಪಂಚಾಯತ ಅಧ್ಯಕ್ಷ, ಸದಸಸ್ಯರು, ಹಿರಿಯ ಅಧಿಕಾರಿಗಳು, ಇನಾಂವೀರಾಪೂರ ಗ್ರಾಮದ ಪ್ರಮುಖರು, ಸಾರ್ವಜನಿಕರು ಇದ್ದರು.





