ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಲೋಹಿಯಾ ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ.
ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರ ಆಕಾಶ್ ಮಠಪತಿ (25) ಮೃತ ಯುವಕ. ಆಕಾಶ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಆಕಾಶ್ ಮಠಪತಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ನೇಹಾ ರೀತಿಯ ಮತ್ತೊಂದು ಪ್ರಕರಣ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆ
ಈ ಪ್ರಕರಣದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ರೇಣುಕಾ ಸುಕುಮಾರ, “ಪ್ರಾಥಮಿಕ ತನಿಖೆಯಲ್ಲಿ ಆಕಾಶ್ ತಲೆಗೆ ಗಾಯವಾಗಿರುವುದು ಕಂಡು ಬಂದಿದ್ದು, ಬೇರೆ ಎಲ್ಲಿಯೂ ಗಾಯವಿಲ್ಲ” ಎಂದು ತಿಳಿಸಿದ್ದಾರೆ.
ಇನ್ನು “ತಂದೆ ಶೇಖರಯ್ಯ ಮಠಪತಿ ಅವರು ಆಕಾಶ್ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರು ಜನರು ಸ್ನೇಹಿತರ ಮೇಲೆ ಆರೋಪ ಮಾಡಿದ್ದಾರೆ” ಎಂದು ಹೇಳಿದರು.
“ಆಕಾಶ್ ತಂದೆ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೊ ಅವರ ಬಗ್ಗೆ ಮಾಹಿತಿ ಕಲೆ ಹಾಕಿ, ಅವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದೇವೆ” ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ರೇಣುಕಾ ಸುಕುಮಾರ ತಿಳಿಸಿದರು.





