ಮೆಂತ್ಯೆ ಸೊಪ್ಪನ್ನು ಬೆಳೆದಿದ್ದ ಯುವ ರೈತ ಅದನ್ನು ಮಾರಾಟಕ್ಕೆ ತಂದಿದ್ದಾನೆ. ಆದರೆ, ಬೆಲೆ ಕುಸಿತದಿಂದ ಅದಕ್ಕೆ ಕನಿಷ್ಠ ಬೆಲೆಯೂ ಸಿಗದೇ ಹೋಗಿದೆ. ಬೇಸರಗೊಂಡ ಆ ರೈತ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಯ ಬಳಿ ಟ್ರ್ಯಾಕ್ಟರ್ ಮೇಲೆ ನಿಂತು ಎಲ್ಲ ಫ್ರೀ, ಎಲ್ಲ ಫ್ರೀ ಯಾರು ಎಷ್ಟು ಬೇಕಾದರೂ ತೆಗೆದುಕೊಳ್ಳಿ ಎಂದು ಎರಡೂ ಕೈಗಳನ್ನು ಮೇಲೆತ್ತಿ ಕೂಗಿ ಕರೆದು ಸೊಪ್ಪನ್ನು ಹಂಚಿಬಿಟ್ಟ. ಹಾಗೆ ಮಾಡಿದ ಮೇಲೆ ಆತನ ಮುಖದಲ್ಲಿ ನಗುವಿತ್ತು; ಆದರೆ ಆತನ ಎದೆಯಲ್ಲಿ ನೋವಿತ್ತು.
ಧಾರವಾಡ-ಹುಬ್ಬಳ್ಳಿ ಅವಳಿ ನಗರದ ಎಪಿಎಂಸಿ ಮಾರ್ಕೆಟ್‌ನಲ್ಲಿ ಬೆಲೆ ಕುಸಿತದಿಂದ ರೋಸಿಹೋದ ರೈತನೊಬ್ಬ ಮೆಂತ್ಯೆ ಸೊಪ್ಪನ್ನು ಜನರಿಗೆ ಉಚಿತವಾಗಿ ಹಂಚಿದ ಘಟನೆ ನಡೆದಿದೆ.
ಬಸವರಾಜ ಟ್ರ್ಯಾಕ್ಟರ್‌ನಲ್ಲಿ ಮೆಂತ್ಯೆ ಸೊಪ್ಪು ಹಾಕಿಕೊಂಡು ಮಾರುಕಟ್ಟೆಗೆ ಬಂದಿದ್ದ, ದಲ್ಲಾಳಿಗಳು ತುಂಬಾ ಕಡಿಮೆ ದರಕ್ಕೆ ಅದನ್ನು ಕೇಳಿದರು. ಆ ಬೆಲೆಗೆ ಸೊಪ್ಪು ಕೊಡಲು ಬಸವರಾಜನಿಗೆ ಮನಸ್ಸಾಗಲಿಲ್ಲ. ಅದನ್ನು ಶೇಖರಿಸಿಡಲು ಸೂಕ್ತ ವ್ಯವಸ್ಥೆಯಿಲ್ಲ. ಕಷ್ಟಪಟ್ಟು ಶೇಖರಿಸಿ ಇವತ್ತು ಬಿಟ್ಟು ನಾಳೆ ತಂದರೂ ಮಾರುಕಟ್ಟೆಯಲ್ಲಿ ದರ ಹೆಚ್ಚಾಗುವ ಲಕ್ಷಣಗಳೇನೂ ಇಲ್ಲ. ಹೀಗಾಗಿ ವಾಪಸ್ ತೆಗೆದುಕೊಂಡು ಹೋಗಲಾಗದೆ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ತಂದಿದ್ದ ಸೊಪ್ಪನ್ನೆಲ್ಲಾ ಯುವ ರೈತ ಜನರಿಗೆ ಹಂಚಿದ್ದಾನೆ. ಹಾಗೆ ಹಂಚಿದ ನಂತರವೂ ಉಳಿದ ಸೊಪ್ಪನ್ನು ಆ ರೈತ ಟ್ರ್ಯಾಕ್ಟರ್‌ಗೆ ಹಾಕಿಕೊಂಡು, ʼನನ್ನ ಮನೆಯ ದನ ಕರುಗಳಿಗೆ ಹಾಕುತ್ತೇನೆʼ ಎಂದು ವಾಪಸ್ ಹೋಗಿದ್ದಾನೆ.

ಘಟನೆಯ ಬಗ್ಗೆ ರೈತ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ರೈತ ಸಂಘದ ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಂಕದ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಯುವ ರೈತ ತಾನು ಬೆಳೆದ ಮೆಂತ್ಯೆ ಸೊಪ್ಪಿಗೆ ಯೋಗ್ಯ ಬೆಲೆ ಸಿಗುತ್ತದೆ ಅಂದುಕೊಂಡು ಘಟಪ್ರಭಾದಿಂದ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬಂದಿದ್ದ. ಅಲ್ಲಿರುವ ದಲ್ಲಾಳಿಗಳು ಕಡಿಮೆ ಬೆಲೆ ನಿಗದಿ ಮಾಡಿದ ಪರಿಣಾಮ ರೈತನಿಗೆ ಬೇಸರವಾಗಿ ಮೆಂತ್ಯೆ ಸೊಪ್ಪನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ಉಳಿದಿದ್ದನ್ನು ದನ ಕರುಗಳಿಗೆ ಹಾಕುವಂತ ಪರಿಸ್ಥಿತಿ ಬಂದೊದಗಿದೆ” ಎಂದರು.

“ರೈತರಿಗೆ ಉಂಟಾಗುತ್ತಿರುವ ಅನ್ಯಾಯಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಗಮನಿಸಬೇಕಿದೆ. ದಲ್ಲಾಳಿಗಳು ತಮ್ಮ ಮನಸ್ಸಿಗೆ ಬಂದಂತೆ ಬೆಲೆ ನಿಗದಿ ಮಾಡಿ ರೈತನಿಗೆ ದೊಡ್ಡ ಪೆಟ್ಟು ನೀಡುತ್ತಿದ್ದಾರೆ. ಆದ್ಧರಿಂದ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಯೋಗ್ಯಬೆಲೆ ಸಿಗುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದರೆ, ಬಾಯಿಗೆ ಬಂದಂತೆ ದರ ನಿಗದಿ ಮಾಡುವ ದಲ್ಲಾಳಿಗಳಿಂದ ಅದನ್ನು ₹500ರಿಂದ ₹1000ಕ್ಕೆ ಮಾರಿಕೊಳ್ಳಬೇಕಾದ ದುಃಸ್ಥಿತಿ ಬಂದೊದಗಿದೆ. ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗದಂತಾಗಿದೆ. ರಾಜ್ಯ ಮತ್ತು ಕೇಂದ್ರ ಈ ಎರಡೂ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದಲ್ಲಾಳಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಕರಡಿಗಳ ದಾಳಿ; ಅಪಾರ ಬೆಳೆ ಹಾನಿ
“ಅತಿವೃಷ್ಠಿ, ಅನಾವೃಷ್ಠಿಯ ನಡುವೆಯೂ ಅನ್ನದಾತ ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರಾಟ ಮಾಡಿದರೂ ಕನಿಷ್ಠ ಟ್ರ್ಯಾಕ್ಟರ್ ಡೀಸೆಲ್‌ನ ಖರ್ಚೂ ಕೂಡ ಬರುವುದಿಲ್ಲ. ಸಾಲಸೋಲ ಮಾಡಿ ಬೆಳೆದ ಬೆಳೆಗೆ ಈ ರೀತಿ ಬೆಲೆಯೇ ಇಲ್ಲದೆ ಬೀದಿಗೆ ಎಸೆಯುವ ಸ್ಥಿತಿ ಎದುರಾಗಿದೆ. ಮಧ್ಯವರ್ತಿಗಳ ಏಕಸ್ವಾಮ್ಯತೆ ಕೂಡ ರೈತರ ಈ ಸ್ಥಿತಿಗೆ ಕಾರಣ. ಸರ್ಕಾರ ರೈತರ ಬಗ್ಗೆ ಸೂಕ್ತ ಗಮನ ಹರಿಸಬೇಕು” ಎಂದು ಮಾರುಕಟ್ಟೆಗೆ ಬಂದಿದ್ದ ಮತ್ತೊಬ್ಬ ರೈತ ಮಹಾಂತೇಶ್ ಆಗ್ರಹಿಸಿದ್ದಾರೆ.





