ಬೀದರ್ ಜಿಲ್ಲೆಯ ಹುಲಸೂರ, ಮನ್ನಾಏಖ್ಖೆಳ್ಳಿ ಹಾಗೂ ಕಮಠಾಣ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ʼಪಟ್ಟಣ, ನಗರ ಪ್ರದೇಶಗಳು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ತಮ್ಮ ಅವಧಿಯಲ್ಲಿ ಬೀದರ್ ಜಿಲ್ಲೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹುಮನಾಬಾದ್ ಪುರಸಭೆಗೆ ನಗರಸಭೆ, ಹುಲಸೂರು, ಮನ್ನಾಎಖ್ಖೆಳ್ಳಿ ಹಾಗೂ ಕಮಠಾಣ ಗ್ರಾಮ ಪಂಚಾಯಿತಿಗಳಿಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆʼ ಎಂದು ತಿಳಿಸಿದ್ದಾರೆ.
ʼಈ ಹಿಂದೆ ಬಸವಕಲ್ಯಾಣ ಶಾಸಕರು ಹುಲಸೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಬೇಡಿಕೆ ಮಂಡಿಸಿದ್ದರು. ಆದರೆ, ಹಿಂದಿನ ಅವರದೇ ಬಿಜೆಪಿ ಸರ್ಕಾರ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಕಾಂಗ್ರೆಸ್ ಸರ್ಕಾರ ಜನರ ಭಾವನೆಗೆ ಸ್ಪಂದಿಸಿ ಹುಲಸೂರು ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿ ಸ್ಥಾನಮಾನ ಕೊಡಲು ನಿರ್ಣಯಿಸಿದೆʼ ಎಂದು ಹೇಳಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಬದ್ಧ : ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಜಿಲ್ಲೆಯ ಮೂರು ಗ್ರಾಮ ಪಂಚಾಯತಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಂಪುಟವು ಮಹತ್ವದ ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಣಯಕ್ಕೆ ಸಹಕಾರ ಮತ್ತು ಅನುಮೋದನೆ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಧನ್ಯವಾದ ಸಲ್ಲಿಸಿದ್ದಾರೆ.
ಈ ನಿರ್ಣಯದಿಂದಾಗಿ ಜಿಲ್ಲೆಯ ಈ ಮೂರೂ ಸ್ಥಳಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯಾವುದೇ ಭೇದವಿಲ್ಲದೆ ನಿಷ್ಪಕ್ಷಪಾತವಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿಯೂ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.
ಕಮಠಾಣಾ, ಮನ್ನಾಏಖೇಳ್ಳಿ ಪಟ್ಟಣ ಪಂಚಾಯಿತಿ ಸ್ವಾಗತಾರ್ಹ : ಶಾಸಕ ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಹಾಗೂ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿಗಳನ್ನು ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಇದಕ್ಕಾಗಿ ಮಾಡುತ್ತಿದ್ದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಮಠಾಣಾ ಹಾಗೂ ಮನ್ನಾಏಖೆಳ್ಳಿ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ದಕ್ಷಿಣ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದಲೇ ಕೂಡಿದೆ. ಮೊದಲ ಬಾರಿಗೆ ಇಲ್ಲಿ ಎರಡು ಹೋಬಳಿ ಕೇಂದ್ರಗಳಿಗೆ ಪಟ್ಟಣ ಪಂಚಾಯಿತಿ ಭಾಗ್ಯ ದೊರಕಿದೆ. ಹೆಚ್ಚು ಜನಸಂಖ್ಯೆ ಇರುವ ಎರಡೂ ಗ್ರಾಮಗಳ ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸಿ ಹೆಚ್ಚಿನ ಅಭಿವೃದ್ಧಿಪಡಿಸಲು ಇದರಿಂದ ಬಲ ತುಂಬಿದಂತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಮಠಾಣಾ, ಮನ್ನಾಏಖ್ಖೆಳ್ಳಿಗೆ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಾನು ಶಾಸಕನಾದಾಗಿನಿಂದ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಹಿಂದಿನ ವಿಧಾನಸಭೆ ಅಧಿವೇಶನಗಳಲ್ಲಿ ಸಹ ಕ್ಷೇತ್ರದ ಜನರ ಹಿತದ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೇನೆ. ಸ್ಥಳೀಯ ಗ್ರಾಪಂ ಪ್ರತಿನಿಧಿಗಳು, ಪ್ರಮುಖರ ನಿಯೋಗದೊಂದಿಗೆ ಪೌರಾಡಳಿತ ಸಚಿವರಿಗೆ ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಸಚಿವ ಸಂಪುಟದಲ್ಲಿ ಇದಕ್ಕೆ ಸಮ್ಮತಿ ನೀಡಿದ್ದಕ್ಕಾಗಿ ಕ್ಷೇತ್ರದ ಜನರ ಪರವಾಗಿ ಸರ್ಕಾರಕ್ಕೆ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೆಲ್ದಾಳೆ ಹೇಳಿದ್ದಾರೆ.
ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುವ ಎರಡೂ ಕೇಂದ್ರಕ್ಕೆ ಬರುವ ದಿನಗಳಲ್ಲಿ ಮೂಲಸೌಕರ್ಯ ಕಾಮಗಾರಿಗೆ ಹೆಚ್ಚಿನ ಅನುದಾನ ಬಂದು ಅಭಿವೃದ್ಧಿಗೆ ವೇಗ ಸಿಗಲು ಅನುಕೂಲವಾಗುತ್ತದೆ. ಈ ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಬೀದರ್ ನಗರಸಭೆಗೆ ಮಹಾನಗರ ಪಾಲಿಕೆ ಮಾಡುವ ಘೋಷಣೆ ಮಾಡಿದ್ದು, ಅದು ಸಹ ಈಗ ಕಾರ್ಯರೂಪಕ್ಕೆ ಬಂದಿದೆ. ಬೀದರ್ ಪಾಲಿಕೆಗೆ ದಕ್ಷಿಣ ಕ್ಷೇತ್ರದ ಮೂರು ಗ್ರಾಪಂಗಳ ಎಂಟು ಹಳ್ಳಿಗಳು ಸೇರಿವೆ. ಇವುಗಳಿಗೂ ಸಹ ಹೆಚ್ಚಿನ ಅನುದಾನದ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ : ಬಿಜೆಪಿ ಸಂಭ್ರಮ

ರಾಜ್ಯ ಸಚಿವ ಸಂಪುಟದಲ್ಲಿ ಬಸವಕಲ್ಯಾಣ ಮತಕ್ಷೇತ್ರ ವ್ಯಾಪ್ತಿಯ ಹುಲಸೂರ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿದ ಹುಲಸೂರ ಪಟ್ಟಣದಲ್ಲಿ ಶಾಸಕ ಶರಣು ಸಲಗರ ಅವರು ಗ್ರಾಮಸ್ಥರೊಂದಿಗೆ ಸೇರಿ ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಾಚರಣೆ ಮಾಡಿದರು.
ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು ಸಂತಸ : ವಿಜಯಸಿಂಗ್
ನೂತನ ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸಂಪುಟ ಅನುಮೋದನೆ ನೀಡಿದ್ದು, ಅತ್ಯಂತ ಸಂತಸ ಸುದ್ದಿಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಹೇಳಿದ್ದಾರೆ.
ಹುಲಸೂರ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬೇಕೆಂಬ ಕುರಿತು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಆದರೆ ಅಂದಿನ ಸರ್ಕಾರ ಅದನ್ನು ತಿರಸ್ಕರಿಸಿತು, ಇದೀಗ ನಾವು ಸರ್ಕಾರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅನುಮೋದನೆ ಸಿಕ್ಕಿದೆ.
ಈ ಮಹತ್ವದ ನಿರ್ಣಯಕ್ಕೆ ಸಹಕಾರ ಮತ್ತು ಅನುಮೋದನೆ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ವಿಜಯಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಜನಪ್ರತಿನಿಧಿಗಳ ನಿರಾಸಕ್ತಿ : ಕನಸಾಗಿಯೇ ಉಳಿದ ಮನ್ನಾಏಖೇಳ್ಳಿ ‘ಪಟ್ಟಣ ಪಂಚಾಯಿತಿ’ ರಚನೆ
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಖೆಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಕುರಿತು ʼಈದಿನʼನಲ್ಲಿ 2024 ಡಿ.10ರಂದು ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿರುವುದು ಇಲ್ಲಿ ಸ್ಮರಿಸಬಹುದು.






