ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದಕ್ಕಾಗಿ ನಮ್ಮ ಸರ್ಕಾರ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್. ಆರ್. ಮೆಹರೋಜ್ ಖಾನ್ ಹೇಳಿದರು.
ಬೀದರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಲಬುರಗಿ ವಿಭಾಗದ ಬೀದರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ʼಸರ್ಕಾರದ ಯೋಜನೆಗಳ ಲಾಭ ಎಲ್ಲಾ ಜನರಿಗೆ ಸಿಗಬೇಕಾದರೆ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಈಗಾಗಲೇ ಈ ಯೋಜನೆಗಳ ಲಾಭ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಅಕ್ಕ-ಪಕ್ಕದವರಿಗೂ ಈ ಮಾಹಿತಿ ನೀಡಬೇಕು. ಬೀದರ ಜಿಲ್ಲೆಯಲ್ಲಿ ಶೇ.95% ಪ್ರತಿಶತ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿವೆʼ ಎಂದರು.

ʼಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ದೂರು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಮಟ್ಟದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ತಾಲ್ಲೂಕು ಮಟ್ಟದಲ್ಲಿ ಜನರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯೋಜನೆಗಳ ಲಾಭ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕುʼ ಎಂದು ಹೇಳಿದರು.
ʼಗೃಹಜ್ಯೋತಿ ಯೋಜನೆಗಳ ಲಾಭ ಪಡೆಯುತ್ತಿರುವ ಫಲಾನುಭವಿಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಶಕ್ತಿ ಯೋಜನೆ ಅಡಿ ಜಿಲ್ಲೆಯಲ್ಲಿ ಪ್ರತಿದಿನ 1.10 ಲಕ್ಷ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಸ್‌ಗಳ ಸಮಯ ಬದಲಾಯಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಬೇಕುʼ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ʼಯುವ ನಿಧಿ ಯೋಜನೆ ನೊಂದಣಿ ಬೀದರ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಈ ಕುರಿತು ಹೆಚ್ಚಿನ ಪ್ರಚಾರ ನೀಡುವ ಮೂಲಕ ನಿರುದ್ಯೋಗ ಯುವಕ-ಯುವತಿಯರಿಗೆ ಈ ಯೋಜನೆ ಲಾಭ ಹೆಚ್ಚಿನ ರೀತಿಯಲ್ಲಿ ಪಡೆಯುವಂತಾಗಬೇಕು. ಒಟ್ಟು 7,266 ಅರ್ಜಿಗಳಲ್ಲಿ ಡಿಪ್ಲೊಮಾದ 157 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಹೆಚ್ಚಿಗೆ ಆಗಬೇಕಿತ್ತು. ಯುವ ನಿಧಿ ಯೋಜನೆ ಅಧಿಕಾರಿ ಕಾಲೇಜುಗಳಲ್ಲಿ ಈ ಕುರಿತು ಮಾಹಿತಿ ನೀಡಬೇಕು. ಯುವನಿಧಿ ಯೋಜನೆ ಅಡಿಯಲ್ಲಿ ನೋಂದಣಿಯಾದ ಯುವಕರಿಗೆ ಕೌಶಲ್ಯ ತರಬೇತಿ ನೀಡಬೇಕುʼ ಎಂದು ತಿಳಿಸಿದರು.

ಬಳಿಕ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಈ ಯೋಜನೆಗಳು ಅನುಷ್ಠಾನ ಆಗುತ್ತಿವೆ ಜನರಿಗೆ ಇದರ ಲಾಭ ಯಾವ ರೀತಿಯಲ್ಲಿ ಸಿಗುತ್ತಿದೆ ಎಂಬ ಮಾಹಿತಿ ಪಡೆದುಕೊಂಡರು. ನಮಗೆ ತಿಂಗಳಿಗೆ ಮೂರು ಸಾವಿರ ರೂ. ಉಳಿತಾಯವಾಗುತ್ತಿದೆ. ನಮ್ಮ ಮಕ್ಕಳಿಗೆ ಶಾಲೆಯ ಫೀ. ಕಟ್ಟಲು ಅನುಕೂಲವಾಗಿದೆ. ಆರೋಗ್ಯ ಚೆನ್ನಾಗಿ ಇಲ್ಲದ ಸಮಯದಲ್ಲಿ ಆಸ್ಪತ್ರೆಗೆ ತೋರಿಸಲು ಗೃಹಲಕ್ಷ್ಮೀ ಯೋಜನೆ ಹಣದಿಂದ ಅನುಕೂಲವಾಗಿದೆ ಎಂದು ವಿವಿಧ ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿ ಒಟ್ಟಿನಲ್ಲಿ ಈ ಯೋಜನೆಗಳಿಂದ ನಮಗೆ ಬಹಳ ಅನುಕೂಲವಾಗಿದೆʼ ಎಂದು ಅನುಭವ ಹಂಚಿಕೊಂಡರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ʼಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಯಾವುದೇ ದೂರುಗಳು ಬಂದರೆ ಲಿಖಿತವಾಗಿ ಮತ್ತು ನಿಖರವಾಗಿ ಮಾಹಿತಿ ನೀಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಲಿದೆ. ಎಲ್ಲರೂ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡೋಣʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | 35 ಗುಂಟೆಯಲ್ಲಿ ʼಡ್ರ್ಯಾಗನ್ ಫ್ರೂಟ್ʼ ಬೆಳೆದ ರೈತ; ವರ್ಷಕ್ಕೆ ಲಕ್ಷ ಲಕ್ಷ ಆದಾಯ
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಸಾರಿಗೆ ಇಲಾಖೆ ಅಧಿಕಾರಿ ಚಂದ್ರಕಾಂತ ಪುಲೇಕರ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.





