ಚಾಮರಾಜನಗರ ಜಿಲ್ಲೆ, ಗ್ರಾಮಾಂತರ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫ್ಲೆಕ್ಸ್ ವಿರೂಪಗೊಳಿಸಿ ಹಾಗೂ ಬುದ್ಧರ ಪುತ್ಥಳಿ ಭಗ್ನಗೊಳಿಸಿದ ಪ್ರಕರಣ ನಡೆದ ಸ್ಥಳಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಭೇಟಿ ನೀಡಿದರು.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವಿವರ ಪಡೆದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮಾತನಾಡಿ, “ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶದಿಂದ ಎಸಗಿರುವ ಕೃತ್ಯವನ್ನು ಯಾರೇ ಮಾಡಿದ್ದರು ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುತ್ತದೆ. ಇಂತಹ ಕೃತ್ಯ ಮರುಕಳಿಸಬಾರದು. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ನಡೆಸಿ ಎಲ್ಲ ಪ್ರಕ್ರಿಯೆಯನ್ನು ಕೈಗೊಂಡಿದೆ. ಶೀಘ್ರವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ” ಎಂದರು.
ಎಲ್ಲಾ ಆಯಾಮಗಳಿಂದ ತನಿಖೆ ಚುರುಕುಗೊಳಿಸಿ, ಶೀಘ್ರದಲ್ಲೇ ಕೃತ್ಯ ಎಸಗಿರುವವರನ್ನು ಬಂಧಿಸಬೇಕು. ಉನ್ನತ ಮಟ್ಟದಲ್ಲಿ ಯಾವುದೇ ಅಗತ್ಯ ನೆರವು ಬೇಕಿದ್ದರೆ ಒದಗಿಸಲಾಗುತ್ತದೆ. ವಿಳಂಬಕ್ಕೆ ಅವಕಾಶವಾಗದಂತೆ ತ್ವರಿತವಾಗಿ ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಎಲ್ಲರಿಗೂ ಹಿತವನ್ನು ಬಯಸುವ ಜ್ಯೋತಿಗೌಡನಪುರದಲ್ಲಿ ನಡೆದಿರುವ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವ ಉದ್ದೇಶಕ್ಕೆ ಕೃತ್ಯ ಎಸಗಲಾಗಿದೆ ಎಂಬ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡಿ ಬೇಗನೆ ತಪ್ಪಿತಸ್ಥರನ್ನು ಬಂಧಿಸಬೇಕು. ನೈಜ ಸಂಗತಿ ಗೊತ್ತಾಗಬೇಕು’ ಎಂದರು.
ಈ ವಿಶೇಷ ವಿಡಿಯೋ ವೀಕ್ಷಿಸಿ https://youtu.be/YFQAjyMLUY0?si=Qfiwxj6LDDWH46WB
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಿ ಬಂಧಿಸಲು ಎಲ್ಲಾ ಕ್ರಮ ವಹಿಸಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಾತಿ ವ್ಯವಸ್ಥೆಯೇ, ಅಭಿವೃದ್ಧಿಯ ವಿರೋಧಿ: ಡಾ ಎಚ್ ವಿ ವಾಸು
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಸೋಮೇಶ್ವರ, ಆರ್. ಮಹದೇವು ಸೇರಿದಂತೆ ಇನ್ನಿತರರು ಇದ್ದರು.





