ಉಡುಪಿ ನಗರದ ಕಲಾ ಪ್ರೇಮಿಗಳಿಗೆ ಚಿರಪರಿಚಿತವಾದ ಸ್ಥಳವೆಂದರೆ ಅದುವೇ ಇನಾಯತ್ ಆರ್ಟ್ ಗ್ಯಾಲರಿ. ಬಣ್ಣಗಳ ಲೋಕದಲ್ಲಿ ಮನಸ್ಸು ತೇಲಾಡುವಂತೆ ಮಾಡುವ ಈ ಗ್ಯಾಲರಿಯಲ್ಲಿ ಜೀವಂತವಾಗಿರುವ ಕಲಾ ಪ್ರಪಂಚದ ಹಿಂದಿನ ಸ್ಫೂರ್ತಿಯೇ ಲಿಯಾಕತ್ ಅಲಿ. ಅಂಗವೈಕಲ್ಯವಿದ್ದರೂ ಸಹ ತಮ್ಮ ಕಲಾತ್ಮಕ ಶಕ್ತಿಯ ಮೂಲಕ ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ಮೂಡಿಸಿರುವ ಅವರು, ಕಲೆ ಎನ್ನುವುದು ಕೇವಲ ಪ್ರತಿಭೆಯಲ್ಲ, ಅದು ಶ್ರಮ ಮತ್ತು ನಂಬಿಕೆಯ ಫಲವೆಂದು ತಮ್ಮ ಜೀವನದಿಂದ ತೋರಿಸಿದ್ದಾರೆ.

ಲಿಯಾಕತ್ ಅಲಿ ಅವರ ಕಲಾ ಪಯಣ ಬಾಲ್ಯದಲ್ಲೇ ಆರಂಭವಾಯಿತು. ತಮ್ಮ ತಂದೆಯಿಂದಲೇ ಕಲಿತ ಚಿತ್ರಕಲೆ ಅವರನ್ನು ಜೀವನದ ಭಾಗವಾಯಿತು. ಚಿತ್ರಕಲೆ ಇವರಿಗೆ ಕೇವಲ ಹವ್ಯಾಸವಲ್ಲ ಅದು ಅವರ ಉಸಿರು. ಬಣ್ಣಗಳಲ್ಲಿ ಅವರು ಬದುಕಿನ ಕಥೆಗಳನ್ನು ಕಟ್ಟುತ್ತಿದ್ದಾರೆ.
1979ರಲ್ಲಿ ಸಿಂಡಿಕೇಟ್ ಬ್ಯಾಂಕ್ ಗೆ ಆರ್ಟಿಸ್ಟ್ ಆಗಿ ಸೇರಿದ ಲಿಯಾಕತ್ ಅಲಿ, ಬ್ಯಾಂಕ್‌ನ ವಿಶೇಷ ಸಂಚಿಕೆಗಳಿಗೆ ವಿನ್ಯಾಸ ಮಾಡುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕೆಲಸದ ಜೊತೆಗೆ ಅವರು ಬಡ ಮಕ್ಕಳಿಗೆ ಚಿತ್ರಕಲೆಯ ತರಬೇತಿ ನೀಡುವ ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಕೈಗೊಂಡರು.
ಈದಿನ.ಕಾಮ್ ಜೊತೆ ಮಾತನಾಡಿದ ಅವರು, ಕಲೆಯ ಆಸಕ್ತಿಯೇ ಮೊಬೈಲ್‌ನ ಕಾಲದಲ್ಲಿ ನಿಧಾನವಾಗಿ ಕುಗ್ಗಿದೆ. ಆದರೆ ನಾವು ಬಡ, ನಿರ್ಗತಿಕ, ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಅವರ ಕಲೆಯು ಕೇವಲ ಚಿತ್ರದಲ್ಲಿ ಸೀಮಿತವಲ್ಲ, ಅದು ಸೇವೆಯ ರೂಪದಲ್ಲೂ ಕಾಣಿಸುತ್ತದೆ. ಉಚಿತವಾಗಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿರುವ ಅವರು, ಪ್ರಸ್ತುತ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಮೂವರು ಟೀಚರ್ ಗಳು ಸಹಕಾರ ನೀಡುತ್ತಿದ್ದಾರೆ.
ಕಳೆದ 27 ವರ್ಷಗಳಿಂದ ನಿರಂತರವಾಗಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಲಿಯಾಕತ್ ಅಲಿ, ಪ್ರತಿ ವರ್ಷ ಹೊಸ ಶೀರ್ಷಿಕೆ, ಹೊಸ ಕಲ್ಪನೆ, ಹೊಸ ಬಣ್ಣದ ಲೋಕವನ್ನು ಕಲಾಭಿಮಾನಿಗಳ ಮುಂದಿಡುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಕೃತಿ, ಮಾನವೀಯತೆ, ಸಮಾಜದ ನೋವು ನಗುವುಗಳು ಜೀವಂತವಾಗಿ ಎದ್ದು ಕಾಣುತ್ತವೆ.

1990ರಲ್ಲಿ ಆಗಿನ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಮನ್ ಅವರ ಕೈಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಗೌರವ ಇವರದಾಗಿದೆ. 2005ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹ ಅವರಿಗೆ ದೊರಕಿತು. ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೂ ಇಷ್ಟರವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವರ ಹೆಸರಿಲ್ಲದೆ ಇರುವುದು ಉಡುಪಿಯ ಕಲಾಸಕ್ತರಿಗೆ ಬೇಸರ ತಂದಿದೆ. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದರೂ ರಾಜ್ಯದ ಗೌರವದಿಂದ ವಂಚಿತರಾದ ಈ ಕಲಾವಿದರ ಸಾಧನೆ ಇಂದು ಪ್ರೇರಣೆಯಾಗಿದೆ. ಕಲೆಗಾಗಿ ಬದುಕಿ, ಕಲೆಯ ಮೂಲಕ ಸಮಾಜಕ್ಕೆ ಬೆಳಕು ನೀಡುವ ನಿಜವಾದ ಕಲಾವಿದರ ಬದುಕು ನಮಗೆಲ್ಲರಿಗೂ ಪ್ರೇರಣೆಯಾಗಲಿ.













