ಬೆಂಗಳೂರಿನಲ್ಲಿ ಅಪಘಾತ, ಅಪಾಯಕಾರಿ ಚಾಲನೆಗಳನ್ನು ತಡೆಯಲು ಸಂಚಾರ ಪೊಲೀಸರು ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದಾಗ್ಯೂ, ಮದ್ಯ ಸೇವಿಸಿ ವಾಹನ ಚಾಲನೆ, ವ್ಹೀಲಿಂಗ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ವರ್ಷದ ಆರು ತಿಂಗಳಲ್ಲಿಯೇ, ಕಳೆದ ವರ್ಷ ದಾಖಲಾಗಿದ್ದ ಒಟ್ಟು ವ್ಹೀಲಿಂಗ್ ಪ್ರಕರಣಗಳನ್ನು ದಾಟಿ ಹೆಚ್ಚು ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ.
ಮದ್ಯ ಸೇವಿಸಿ ವಾಹನ ಚಾಲನೆ, ವ್ಹೀಲಿಂಗ್ ಸಂಬಂಧ ಬೆಂಗಳೂರು ಸಂಚಾರ ಪೊಲೀಸರು ಜೂನ್ ಅಂತ್ಯದ ವೇಳೆಗೆ ಬರೋಬ್ಬರಿ 6,508 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವುಗಳಲ್ಲಿ 6,283 ಪ್ರಕರಣಗಳು ಮದ್ಯ ಸೇವಿಸಿ ವಾಹನ ಚಾಲನೆಗೆ ಸಂಬಂಧಿಸಿದ ಪ್ರಕರಣಗಳಾಗಿದ್ದರೆ, 225 ವ್ಹೀಲಿಂಗ್‌ಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 216 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿದ್ದವು.
ವ್ಹೀಲಿಂಗ್ ಮಾಡುವವರನ್ನು ಗುರುತಿಸಿರುವ ಪೊಲೀಸರು, 93 ಬೈಕ್ ಸವಾರರ ನೋಂದಣಿ ಪ್ರಮಾಣಪತ್ರಗಳನ್ನು (ಆರ್‌ಸಿ) ಅಮಾನತು ಮಾಡಲು ಆರ್‌ಟಿಒ ಕಚೇರಿಗಳಿಗೆ ಕಳುಹಿಸಿದ್ದಾರೆ. ಒಂಬತ್ತು ಸವಾರರ ಡಿಎಲ್‌ಅನ್ನೂ ಅಮಾನತು ಮಾಡಲಾಗಿದೆ.




