ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನೆ, ರೇಷ್ಮೆ ಸಚಿವರಾದ ಕೆ. ವೆಂಕಟೇಶ್ ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು’ ಎಂದು ಹೇಳಿದರು.
“ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ, ಉಪಾಸನ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆಯನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಭಾರತ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿ, ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ ಕೊಡುಗೆ ಸ್ಮರಣಿಯವಾದದ್ದು” ಎಂದರು.
ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಹಾಗೆಯೇ, ಕರ್ತವ್ಯಗಳ ಬಗ್ಗೆಯು ತಿಳಿಸಿದೆ. ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಅವಕಾಶವನ್ನು ಪ್ರತಿಪಾದಿಸಲಾಗಿದೆ. ವ್ಯಕ್ತಿಗೌರವ, ದೇಶದ ಏಕತೆ, ಸಮಗ್ರತೆ, ಭ್ರಾತುತ್ವದಂತಹ ಮಹತ್ತರ ಅಂಶಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದು ತಿಳಿಸಿದರು.

ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, “ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಆಶಯ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಕಾಣಬಹುದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು, ಯಾವುದೇ ಧರ್ಮ, ಜಾತಿ, ಭಾಷೆಯಾದರು ವಿವಿಧತೆಯಲ್ಲಿ ಏಕತೆ ಎಂದು ಸಂವಿಧಾನವು ತಿಳಿಸುತ್ತದೆ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಲಾಗುತ್ತಿದೆ” ಎಂದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, “ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ. ದೇಶದ ಏಕತೆ ಮತ್ತು ಸಮಗ್ರತೆ ಸಂವಿಧಾನದ ಕೊಡುಗೆಯಾಗಿದೆ. ಗೌರವ ಘನತೆಯ ಬಾಳ್ವೆಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಪ್ರತಿಯೊಬ್ಬರು ಮೂಲಭೂತ ಹಕ್ಕು, ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಸಂವಿಧಾನ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ” ಎಂದರು.
ಸಂವಿಧಾನದ ಆಶಯಗಳ ಕುರಿತು ಮುಖ್ಯ ಭಾಷಣ ಮಾಡಿದ ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ದೇವರಾಜು ಮಾತನಾಡಿ, “ನಮ್ಮ ಸಂವಿಧಾನದ ಪ್ರಧಾನ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲರಿಗೂ ಸಾಮಾಜಿಕ, ರಾಜಕೀಯ, ಆರ್ಥಿಕ, ನ್ಯಾಯ ಸಿಗಬೇಕು ಎಂಬುದು ಸಂವಿಧಾನದ ಮುಖ್ಯ ಆಶಯಗಳಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅನೇಕ ದೇಶಗಳಿಗೆ ಪ್ರಭಾವ ಬೀರಿದೆ. ಸಂವಿಧಾನದ ಆಶಯಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರುವಲ್ಲಿ ಸಾರ್ಥಕತೆ ಅಡಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರಾಷ್ಟ್ರದ ಆಡಳಿತ ವ್ಯವಸ್ಥೆಯ ನಿಯಮಗಳ ಕೃತಿಯೇ ಸಂವಿಧಾನ: ಎಸ್. ಜಿ. ಒಂಬತ್ಕೆರೆ

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ ಸೇರಿದಂತೆ ಇನ್ನಿತರರು ಇದ್ದರು.





