ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿಯ ಇರುವ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಅಪಮಾನ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಭಾಲ್ಕಿ-ಹುಮನಾಬಾದ್ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ.
ಕೆಲವು ಕಿಡಿಗೇಡಿಗಳು ಬಸವಣ್ಣನವರ ಪ್ರತಿಮೆಯ ಕೈ ಮುರಿದು ಅವಮಾನಿಸಿ, ಧ್ಜಜ ಕಂಬ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಬೆಳಿಗ್ಗೆ ಗಮನಿಸಿದ ಗ್ರಾಮಸ್ಥರು, ಸಾರ್ವಜನಿಕರು ಕಿಡಿಗೇಡಿಗಳ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸಾರ್ವಜನಿಕರು ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಾಹನ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರಿಂದ ಬಸವಕಲ್ಯಾಣ, ಹುಮನಾಬಾದ್ ಕಡೆ ತೆರಳುವ ಸಾರಿಗೆ ಬಸ್ ಸೇರಿದಂತೆ ಇತರೆ ವಾಹನಗಳು ದಾಡಗಿ ಕ್ರಾಸ್ ಬಳಿ ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿಯ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಕೆಲವು ಕಿಡಿಗೇಡಿಗಳು ಅವಮಾನ ಮಾಡಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. pic.twitter.com/MKubbC8qoF
— eedina.com ಈ ದಿನ.ಕಾಮ್ (@eedinanews) January 15, 2025
ʼಈ ಘಟನೆ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ಶಂಕೆ ಇದೆ, ಆರೋಪಿಗಳು ಯಾರು ಅಂತ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ಘಟನಾ ಸ್ಥಳದಲ್ಲಿ ಇದ್ದು, ಮಾಹಿತಿ ಕಲೆ ಹಾಕುತ್ತಿದ್ದೇವೆʼ ಎಂದು ಖಟಕ ಚಿಂಚೋಳಿ ಠಾಣೆಯ ಪಿಎಸ್‌ಐ ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.





