ಪರಿಪೂರ್ಣ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸಿದ್ದರಾಮನಹುಂಡಿಯಿಂದ ಕಾಲ್ನಡಿಗೆ ಜಾಥಕ್ಕೆ ಹೊರಟಿದ್ದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯ ಒಳಮೀಸಲಾತಿ ಹೋರಾಟಗಾರರನ್ನು ಬಂಧಿಸಲಾಗಿದೆ. ಪೊಲೀಸರು ಜಾಥ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.
ಡಿಸೆಂಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರಾದ ಸಿದ್ದರಾಮನಹುಂಡಿಯಿಂದ ಕಾಲ್ನಡಿಗೆ ಜಾಥ ನಡೆಸುವ ಬಗ್ಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕೇಶವ ಮೂರ್ತಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಒಳಮೀಸಲಾತಿ ಕಗ್ಗಂಟು: ಸಂಪೂರ್ಣ ಎಚ್ಚರ ತಪ್ಪಿದ ಕಾಂಗ್ರೆಸ್ ಸರ್ಕಾರ!
ಅದರಂತೆ ಇಂದು ಹೋರಾಟಗಾರರು ಜಾಥಕ್ಕೆ ಮುಂದಾಗಿದ್ದರು. ಆದರೆ ಹೋರಾಟಗಾರರನ್ನು ತಡೆದಿರುವ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಹೋರಾಟಗಾರರಾದ ಎಸ್. ಮಾರೆಪ್ಪ, ಶಿವರಾಯ ಅಕ್ಕರಕಿ, ಹೇಮರಾಜ್ ಹಸ್ಕಿಹಾಳ ಮೊದಲಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಫೇಸ್‌ಬುಕ್ ವಿಡಿಯೋದಲ್ಲಿ ಮಾಹಿತಿ ನೀಡಿರುವ ಹಿರಿಯ ಹೋರಾಟಗಾರರಾದ ಶಿವರಾಯ ಅಕ್ಕರಕಿ, “ಹೋರಾಟಗಾರರನ್ನು ಬಂಧಿಸಿರುವುದಲ್ಲದೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೋರಾಟ ತಡೆಯುವ ಈ ರೀತಿಯ ರಾಜಕೀಯ ಪಿತೂರಿಯನ್ನು ನಾವು ಖಂಡಿಸುತ್ತೇವೆ” ಎಂದು ಹೇಳಿದ್ದಾರೆ. ಹಾಗೆಯೇ ಇನ್ನುಳಿದ ಹೋರಾಟಗಾರರು ಈ ಪಾದಯಾತ್ರೆಯನ್ನು ಮುಂದುವರೆಸುವಂತೆ ಕರೆ ನೀಡಿದ್ದಾರೆ.





