ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ಘೋಷಿಸಿದಂತೆ ಫೆಬ್ರವರಿ 11 ರಿಂದ 13ರವರೆಗೆ, ಒಟ್ಟು ಐದು ದಿನಗಳ ಕಾಲ ಭಾರತ ದೇಶದ ಮೊದಲ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆಯನ್ನು ರಾಜ್ಯದ ಕೊಡಗು ಜಿಲ್ಲೆಯ ನಾಗರಹೊಳೆ ಹಾಗೂ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ಹಮ್ಮಿಕೊಳ್ಳಲಾಗಿದೆ. 18 ದೇಶಗಳ ಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳ ನೇತೃತ್ವದೊಂದಿಗೆ ಸಭೆ ನಡೆಯಲಿದೆ. ಆದರೆ, ಪ್ರಶ್ನೆಯಿರುವುದು ಬಜೆಟ್ ಮಂಡನೆಯಾಗಿ ವಾರ ಕಳೆಯುವುದರೊಳಗೇ ಏಕಾಏಕಿ, ಅದುವೇ ಆದಿವಾಸಿ, ಬುಡಕಟ್ಟು ಸಮುದಾಯಗಳು ವಾಸಿಸುವ ಜಾಗದಲ್ಲಿ, ಈಗ ತಾನೆ ಸಫಾರಿ ಬಂದ್ ಮಾಡಿರುವ ಪ್ರದೇಶದಲ್ಲಿಯೇ ಶೃಂಗಸಭೆ ಆಯೋಜನೆ ಮಾಡಿರುವುದರ ಹಿಂದೆ ಹುನ್ನಾರ ಏನಿದೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆಯ ಕುರಿತಾಗಿ ಜಾಗತಿಕ ಗಮನ ಸೆಳೆಯುವ ಉದ್ದೇಶ ಹೊಂದಿದೆ ಎನ್ನುವುದಾಗಿದೆ. ಆದರೆ, ಇಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದೇ ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿದ್ದು, ಹುಲಿ, ಚಿರತೆ, ಆನೆ ದಾಳಿಗೆ ಹಲವರು ಮೃತಪಟ್ಟಿರುವ ಕಾರಣ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಿರುವಾಗ, ಅದೇ ಪ್ರದೇಶದಲ್ಲಿ ಶೃಂಗಸಭೆ ನಡೆಸಿ ದೇಶ, ವಿದೇಶಗಳ ಗಮನ ಸೆಳೆಯುವುದಾದರು ಏನಿದೆ? ಸಫಾರಿ ನಿಂತ ಬಳಿಕ ಈಗ ತಾನೆ ಪ್ರಾಣಿಗಳ ಉಪಟಳ ಸ್ವಲ್ಪ ಹತೋಟಿಗೆ ಬಂದಿದೆ. ಅಂಥದರಲ್ಲಿ, ನಿರ್ಬಂಧ ಹೇರಿರುವ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮದ ಆಯೋಜನೆ ಹಿಂದೆ ಬೇರೆಯದ್ದೇ ಯೋಚನೆ ಅಡಗಿರುವಂತೆ ತೋಚುತ್ತಿದೆ ಎಂಬ ಶಂಕೆಗಳು ವ್ಯಕ್ತವಾಗಿವೆ.

ಪ್ರಸ್ತುತ ಸಭೆಯಲ್ಲಿ ದೇಶ, ವಿದೇಶಗಳಿಗೆ ಮಾದರಿ ಎಂಬಂತೆ ಬಂಡೀಪುರ ಹಾಗೂ ನಾಗರಹೊಳೆ ತೋರಿಸಲು, ಅತಿ ಹೆಚ್ಚು ಹುಲಿ, ಆನೆ ಸೇರಿದಂತೆ ಹಲವು ಪ್ರಾಣಿಗಳ ಸಂರಕ್ಷಣೆ ವಿಚಾರವಾಗಿ ಚರ್ಚೆ ನಡೆದು, ಆಧುನಿಕ ತಂತ್ರಜ್ಞಾನ ಅಳವಡಿಕೆ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಸಹಕಾರ, ಉತ್ತಮ ಕಾರ್ಯಪದ್ದತಿಗಳ ಕುರಿತಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ, ಹುಲಿ, ಆನೆ ವಾಸಸ್ಥಾನ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ, ಸ್ವತಂತ್ರ ನಿರ್ವಹಣೆಗೆ ಒತ್ತು ನೀಡುವ ಯೋಜನೆಗೆ ₹150 ಕೋಟಿ ರೂಪಾಯಿ ಇರಿಸಿರುವುದರ ಹಿಂದೆ ಬೇರೆಯದ್ದೇ ಉದ್ದೇಶ ಅಡಗಿರುವ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲೆ, ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕೆಂದರೇನೆ ಸಾಕಷ್ಟು ಪ್ರಚಾರ ಮಾಡಬೇಕು, ಅಷ್ಟೇ ಸಮಯದ ಅಗತ್ಯ ಇರುವಾಗ, ಯಾವುದೇ ಪ್ರಚಾರವು ಇರದೇ, ಶೃಂಗಸಭೆ ಆಯೋಜನೆ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಮಾನವ-ವನ್ಯಜೀವಿ ಸಂಘರ್ಷ ಏರ್ಪಟ್ಟು, ಸಫಾರಿ ನಿಲ್ಲಿಸಿ, ಮೂಲ ನಿವಾಸಿಗಳಾದ ಆದಿವಾಸಿ, ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವ ಹೊತ್ತಿನಲ್ಲಿ ಶೃಂಗಸಭೆ ನಡೆಸಿ ಮಾದರಿ ಎಂಬಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಹೊರಟಿರುವುದು ಎಷ್ಟು ಸರಿ!

ಕೊಡಗು ಜಿಲ್ಲೆಯ ನಾಗರಹೊಳೆ ಕಾಡುಗಳು ಜೇನುಕುರುಬ, ಬೆಟ್ಟಕುರುಬ, ಪಣಿಯ ಮತ್ತು ಯರವ ಸಮುದಾಯಗಳ ಪಾರಂಪರಿಕ ನೆಲೆಯಾಗಿವೆ. ಆದಿವಾಸಿ ಸಮುದಾಯಗಳು ಪೀಳಿಗೆಯಿಂದ ಪೀಳಿಗೆಗೆ ತಮ್ಮ ಪೂರ್ವಜರಿಂದ ಬಂದ ಮೌಲ್ಯಗಳು ಮತ್ತು ಜ್ಞಾನಪರ ಪದ್ಧತಿಗಳೊಂದಿಗೆ ಕಾಡುಗಳು ಹಾಗೂ ವನ್ಯಜೀವಿಗಳನ್ನು ರಕ್ಷಿಸಿ, ಸಂರಕ್ಷಿಸಿಕೊಂಡು ಬಂದಿದ್ದಾರೆ. ಇಲ್ಲಿನ ಆದಿವಾಸಿ ಜನರು ನಂಬಿಕೆಯಿಂದ ಕಾಡುಗಳು ಮತ್ತು ಪ್ರಾಣಿಗಳನ್ನು ತಮ್ಮ ಅಸ್ತಿತ್ವವನ್ನಾಗಿಸಿಕೊಂಡು, ತಮ್ಮ ಜೀವನದ ಮೂಲತತ್ವವಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ನಾಗರಹೊಳೆಯ ಅಭಯಾರಣ್ಯದಲ್ಲಿ ಹುಲಿ, ಕೆನ್ನಾಯಿ, ಆನೆ, ಕರಡಿ, ನವಿಲುಗಳು ಮತ್ತು ಹಲವು ಪ್ರಭೇದದ ಮರಗಿಡಗಳು, ಜಲಚರಗಳನ್ನು ಹೊಂದಿದ್ದು, ನೆಲಮೂಲ ವಾಸಿಗಳಾದ ಆದಿವಾಸಿ, ಬುಡಕಟ್ಟು ಸಮುದಾಯ ಪ್ರಕೃತಿಯನ್ನೇ ದೇವರುಗಳಾಗಿ ಪೂಜಿಸುತ್ತ ಉಸಿರನ್ನಾಗಿಸಿಕೊಂಡು ಬದುಕುತಿದ್ದಾರೆ. ಆಧುನಿಕತೆಯ ಅರಿವಿರದ ಸಮುದಾಯಗಳು ಪೀಳಿಗೆಯಿಂದ ಪೀಳಿಗೆಗೆ, ತಮ್ಮ ತಮ್ಮ ಮನೆತನ, ಕಾಡುಗಳು ಮತ್ತು ಪ್ರಾಣಿಗಳನ್ನು ಪವಿತ್ರ ಕರ್ತವ್ಯದ ಭಾಗವಾಗಿ ರಕ್ಷಿಸಿಕೊಂಡು ಬಂದಿವೆ.

ಆದಿವಾಸಿ -ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಗಳಲ್ಲಿ ಪ್ರಕೃತಿ ಆರಾಧನೆ, ಸಂರಕ್ಷಣೆ ಆಳವಾಗಿ ಬೇರೂರಿದೆ. ಆದಿವಾಸಿ ಸಂಪ್ರದಾಯಗಳು ಮತ್ತು ಪರಂಪರೆಗಳನ್ನು ಭಾರತದ ಸಂವಿಧಾನದ ಐದನೇ ಅನುಸೂಚಿ ಮತ್ತು ಪೆಸಾ ಕಾಯಿದೆ, 1996 ಮತ್ತು ಅರಣ್ಯ ಹಕ್ಕು ಕಾಯ್ದೆ 2006 ಮುಂತಾದ ಕಾನೂನುಗಳ ಮೂಲಕವೂ ಒಳಗೊಳ್ಳಿಸಲಾಗಿದೆ. ಹೀಗಿರುವಾಗ, ಆಳುವ ಸರ್ಕಾರಗಳು ಪರಂಪರೆ ಮರೆತು ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಪುನರ್ವಸತಿ ಹೆಸರಿನಲ್ಲಿ ಕಾಡಿಂದಾಚೆಗೆ ಹಾಕುವ ಸರ್ಕಾರ, ಅದೇ ಪ್ರಾಣಿಗಳನ್ನು ತೋರಿಸಲು ಪ್ರವಾಸೋದ್ಯಮದ ಹೆಸರಿನಲ್ಲಿ ಸಫಾರಿಗೆ ಅವಕಾಶ ಕಲ್ಪಿಸಿ ತೊಂದರೆ ನೀಡುತ್ತಿತ್ತು. ಕಾಡಿನಲ್ಲೇ ಇರುವ ಆದಿವಾಸಿ-ಬುಡಕಟ್ಟು ಜನರ ನಡುವೆ ಇರದ ವನ್ಯಜೀವಿ-ಮಾನವ ಸಂಘರ್ಷ, ಕಾಡಿಂದಾಚೆಗೆ ಹೆಚ್ಚಿದ್ದು ವಿಪರ್ಯಾಸ. ಇದೀಗ ಅದೇ ಕಾಡಿನಲ್ಲಿ ಶೃಂಗಸಭೆ, ಚರ್ಚೆ ಹೀಗೆಲ್ಲ ನಡೆಸಲು ಹೊರಟಿರುವುದು ಎಷ್ಟು ಸೂಕ್ತ. ಇದನ್ನು ನೋಡುವ ದಾಟಿಯಲ್ಲಿ ಹೇಳುವುದಾದರೆ ನರಳುತ್ತಿರುವ ಜನರ ನಡುಗಿನ ರೋಧನವನ್ನು ಮಾದರಿ ಎಂಬಂತೆ ವಿಶ್ವಕ್ಕೆ ತೋರಲು ಹೊರಟಿದ್ದಾರೆಯೇ?

ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿ ಹಾಗೂ ನಾಗರಹೊಳೆ ಗ್ರಾಮ ಸಭೆಗಳ ಒಕ್ಕೂಟ ಅಧ್ಯಕ್ಷ ಜೆ ಕೆ ತಿಮ್ಮ ಈ ದಿನ.ಕಾಮ್ ಜತೆಗೆ ಮಾತನಾಡಿ, “ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023ರ ಏಪ್ರಿಲ್ 9ರಂದು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಉದ್ಘಾಟಿಸಿದರು. ಈ ಸಂದರ್ಭವು ಭಾರತದಲ್ಲಿ ಹುಲಿ ಸಂರಕ್ಷಣೆಯ 50 ವರ್ಷಗಳನ್ನು ಆಚರಿಸುವ ಸಂದರ್ಭವಾಗಿತ್ತು. ಆದರೆ, ಅದೇ ದಿನ ನಾಗರಹೊಳೆಯ ಆದಿವಾಸಿ ಮೂಲ ನಿವಾಸಿ ಜನರು ಈ ವೈಭವಮಯ ಆಚರಣೆಗೆ ವಿರೋಧವಾಗಿ ಪ್ರತಿರೋಧ ವ್ಯಕ್ತಪಡಿಸಿ, ಈ ಯೋಜನೆಯೊಂದಿಗೆ ನಡೆದ ಹಿಂಸೆ, ಬಲವಂತವಾಗಿ ಕಾಡುಗಳಿಂದ ಎತ್ತಂಗಡಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಪ್ರತಿಭಟಿಸಿದ್ದೆವು. ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿಯ ಬ್ಯಾನರ್ ಅಡಿಯಲ್ಲಿ, ನಾಗರಹೊಳೆಯ ಜನರು ಹುಲಿ ಸಂರಕ್ಷಣೆಯ ಹೆಸರಿನಲ್ಲಿ ನಮ್ಮಿಂದ ಕಸಿದುಕೊಳ್ಳಲ್ಪಟ್ಟಿರುವ ಪೂರ್ವಿಕ ಹಾಗೂ ಸಮುದಾಯ ಜಮ್ಮಗಳ(ಸಾಂಪ್ರದಾಯಿಕ ಗಡಿ) ಮತ್ತು ಕಾಡುಗಳ ಮೇಲಿನ ಹಕ್ಕುಗಳನ್ನು ಮಾನ್ಯತೆ ನೀಡುವಂತೆ ಆಗ್ರಹಿಸಿದ್ದೆವು” ಎಂದರು.

“1973ರಲ್ಲಿ ಭಾರತ ಸರ್ಕಾರವು ಅಂತಾರಾಷ್ಟ್ರೀಯ ಲಾಬಿ ಮತ್ತು ಬಂಡವಾಳದ ಸಹಾಯದೊಂದಿಗೆ ʼಪ್ರಾಜೆಕ್ಟ್ ಟೈಗರ್ʼ ಆರಂಭಿಸಿದ ಬಳಿಕದಿಂದಲೇ, ಬಲವಂತದ ಎತ್ತಂಗಡಿ, ಮೂಲಭೂತ ಹಕ್ಕುಗಳ ಕಡಿತ ಮತ್ತು ಪೀಳಿಗೆಗಳಿಂದ ವಾಸವಿದ್ದ ಪೂರ್ವಿಕ ನೆಲೆಗಳಿಂದ ಜನರನ್ನು ಹಿಂಸಾತ್ಮಕವಾಗಿ ಬೇರ್ಪಡಿಸುವ ಮೂಲಕ ಮೂಲನಿವಾಸಿ ಸಮುದಾಯಗಳ ಹಕ್ಕುಗಳನ್ನು ನಿರಂತರವಾಗಿ ತುಳಿಯಲಾಗಿದೆ. ಭಾರತ ದೇಶ 2005ರಲ್ಲಿ ಎನ್‌ಟಿಸಿಎ ರಚನೆಯಾದ ನಂತರದಿಂದ ಹುಲಿ ಸಂರಕ್ಷಿತ ಪ್ರದೇಶಗಳಿಂದ ನಡೆದ ಬಲವಂತದ ತೆರವುಗಳನ್ನು ‘ಸ್ವಯಂ ಪ್ರೇರಿತ ಸ್ಥಳಾಂತರ’ ಎಂದು ಸುಳ್ಳು ಮಾಹಿತಿ ಬಿಂಬಿಸುತ್ತಿದೆ. ಈ ಎತ್ತಂಗಡಿಯಿಂದ ಜನರ ಜೀವನ, ಜೀವನೋಪಾಯ ಮತ್ತು ಪಾರಂಪರಿಕ ಸಂಸ್ಕೃತಿಗಳಿಗೆ ಅಪಾರ ಹಾನಿಯನ್ನುಂಟುಮಾಡಿವೆ” ಎಂದು ಆರೋಪಿಸಿದರು.
“ಎನ್‌ಟಿಸಿಎ ಜೂನ್ 19ರ ನಿರ್ದೇಶನ ಮೂಲನಿವಾಸಿಗಳ ಸ್ವಾಯತ್ತತೆ ಮೇಲೆ ನಡೆದ ಮತ್ತೊಂದು ದಾಳಿಯಾಗಿದೆ. ಈ ಸ್ಥಳಾಂತರ ನಿರ್ದೇಶನದ ಬಗ್ಗೆ ದೇಶಾದ್ಯಂತ ಆದಿವಾಸಿಗಳು ಪ್ರತಿಭಟನೆ ನಡೆಸಿಯೂ ಎನ್‌ಟಿಸಿಎ ಈ ವಿಚಾರದ ಬಗ್ಗೆ ಸ್ಪಷ್ಟತೆಯನ್ನು ನೀಡಲಿಲ್ಲ. ಭಾರತದಲ್ಲಿ ಅಧಿಕೃತವಾಗಿ ಘೋಷಿಸಲಾದ 58 ಹುಲಿ ಸಂರಕ್ಷಿತ ಪ್ರದೇಶಗಳು ಮೂಲ ನಿವಾಸಿಗಳ ಪೂರ್ವಿಕರ ನೆಲೆಯ ಮೇಲೆಯೇ ಬಲವಂತವಾಗಿ ಘೋಷಿಸಲಾಗಿದೆ. ಶತಮಾನಗಳಿಂದ ಈ ಕಾಡುಗಳಲ್ಲಿ ವಾಸಿಸುತ್ತಿರುವ ಸಮುದಾಯಗಳಿಂದ ಸಹಮತ ಪಡೆಯಲು ಭಾರತ ಸರ್ಕಾರವು ಎಂದಿಗೂ ಪ್ರಯತ್ನಿಸಿಲ್ಲ. ಮೂಲನಿವಾಸಿ ಸಮುದಾಯಗಳು, ಕಾಡುಗಳು ಮತ್ತು ವನ್ಯಜೀವಿಗಳು ಒಂದಾಗಿ ವಾಸಿಸುತ್ತಿದ್ದರೂ ಕಾಲಕ್ರಮೇಣ ಬಲವಂತವಾಗಿ ರೂಪುಗೊಂಡ ಜೀವನಶೈಲಿಯಲ್ಲಿ ಬದುಕುವಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕು ಸಂಚಾಲಕ ಪಿ.ಸಿ. ರಾಮು ಮಾತನಾಡಿ, ಜನರು, ಕಾಡುಗಳು ಮತ್ತು ವನ್ಯಜೀವಿಗಳ ನಡುವಿನ ಈ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ಇಲ್ಲದ ಸರ್ಕಾರ ಮತ್ತು ಅದರ ಸಂರಕ್ಷಣಾ ಮಾಫಿಯಾ ಗುಂಪುಗಳು, ಕಾಡುಗಳು ಹಾಗೂ ವನ್ಯಜೀವಿಗಳತ್ತ ಇರುವ ಪೋಷಕ-ರಕ್ಷಕ ದೃಷ್ಟಿಕೋನದ ಕಾರಣದಿಂದಲೇ, ಈ ಜೀವನಶೈಲಿಯನ್ನು ಹಿಂಸಾತ್ಮಕವಾಗಿ ಭಂಗಗೊಳಿಸುತ್ತಿವೆ. ಆದರೆ, ನಮ್ಮ ಕಾಡುಗಳು, ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಗಳು, ರೂಢಿಚಾಲಿತ ಹಕ್ಕುಗಳು, ಭಾಷೆ ಮತ್ತು ಜೀವನ ಶೈಲಿಗಳು ನಮ್ಮ ಜನರ ಮೇಲೆ ನಡೆದಿರುವ ಸಂಯುಕ್ತ ಹಾಗೂ ಐತಿಹಾಸಿಕ ಅನ್ಯಾಯದಿಂದ ಗಂಭೀರ ಅಪಾಯಕ್ಕೆ ಒಳಗಾಗಿವೆ. ನಮ್ಮ ಅರಣ್ಯ ಹಕ್ಕುಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸುವುದು, NTCA(ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ)ದ ಸ್ಥಳಾಂತರ ಪ್ಯಾಕೇಜುಗಳನ್ನು ಒಪ್ಪಿಕೊಳ್ಳಲು ನಮ್ಮ ಜನರನ್ನು ಬಲವಂತಗೊಳಿಸುವುದು ಹಾಗೂ ಸಫಾರಿ ಮತ್ತು ವನ್ಯಜೀವಿ ಪ್ರವಾಸೋದ್ಯಮಕ್ಕಾಗಿ ನಮ್ಮ ಸಮುದಾಯ ಭೂಮಿಗಳನ್ನು ಬಲವಂತವಾಗಿ ಬಳಸುವುದು ಈ ಅನ್ಯಾಯಗಳ ಭಾಗವಾಗಿದೆ” ಎಂದು ಆರೋಪಿಸಿದರು.

ಬಳ್ಳೆಹಾಡಿ ರಮೇಶ್ ಮಾತನಾಡಿ, “ನಾಗರಹೊಳೆಯ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ಜನಾಂಗದ ದೇವರುಗಳನ್ನು ಪೂಜಿಸುವ ಪವಿತ್ರ ಆಚರಣೆಗಳನ್ನು ನಡೆಸಿದರೆ ನಮ್ಮ ಮೇಲೆ ಬೆದರಿಕೆ ಹಾಕಿ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. 1870ರ ದಶಕದ ಅಂತ್ಯದಲ್ಲಿ ನಾಗರಹೊಳೆ ರಿಸರ್ವ್ ಫಾರೆಸ್ಟ್ ಆಗಿ ಘೋಷಿತವಾದ ಬಳಿಕ, 1955ರಲ್ಲಿ ಗೇಮ್ ರಿಸರ್ವ್, 1980ರ ಮಧ್ಯಭಾಗದಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಮತ್ತು 2007ರಿಂದ ಹುಲಿ ಸಂರಕ್ಷಿತ ಪ್ರದೇಶವಾಗಿ ಪರಿವರ್ತನೆಯಾಗಿದೆ. ಆದರೆ, ಈ ಪ್ರಕ್ರಿಯೆಯಾದ್ಯಂತ ನಮ್ಮ ಜನರನ್ನು ನಮ್ಮ ಪಾರಂಪರಿಕ ಭೂಮಿ ಮತ್ತು ಅರಣ್ಯಗಳಿಂದ ನಿರಂತರವಾಗಿ ವಂಚಿಸಲಾಗಿದ್ದು, ಸ್ಥಳಾಂತರಿಸಲಾಗುತ್ತಿದೆ” ಎಂದರು.
“ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯತೆ ನಾಶದ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಾಗೂ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಿರುವ ಪ್ರದೇಶಗಳಲ್ಲಿ ಆದಿವಾಸಿ ಜನರ ಮೇಲೆ ಭಾರೀ ಮಾನವ ಹಕ್ಕು ಉಲ್ಲಂಘನೆಗಳು ನಡೆಯುತ್ತಿರುವ ಈ ಸಮಯದಲ್ಲೇ, ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಅಂತರಾಷ್ಟ್ರೀಯ ಹುಲಿ ಶೃಂಗ ಸಭೆಯ ಬೆಳವಣಿಗೆ ಸಂಭವಿಸಿದೆ. ಸಂರಕ್ಷಿತ ಪ್ರದೇಶದಲ್ಲಿರುವ ಆದಿವಾಸಿ ಜನರ ಮತ್ತು ನಮ್ಮ ಸಾಂಪ್ರದಾಯಿಕ ಗಡಿ ಜಮ್ಮದ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಕ್ಕೆ ಯಾವುದೇ ಗಮನ ನೀಡದೆ, ಹೊರ ದೇಶದ ಸರ್ಕಾರಗಳೊಂದಿಗೆ ಕೈಜೋಡಿಸಿ ಅಂತಾರಾಷ್ಟ್ರೀಯ ಸಂರಕ್ಷಣಾ ಗುಂಪುಗಳು ಮೂಲನಿವಾಸಿ ಕಾಡುಗಳನ್ನು ಇನ್ನಷ್ಟು ಸ್ವಾಧೀನಪಡಿಸಿಕೊಳ್ಳಲು, ಅತಿಕ್ರಮಿಸಲು ಹಾಗೂ ಹೆಚ್ಚಿನ ಲಾಭಗಳಿಸಲು ಮುಂದಾಗಿವೆ” ಎಂದು ಕಿಡಿಕಾರಿದರು.

ಆದಿವಾಸಿ ಮುಖಂಡರಾದ ಜೆ ಎಸ್ ರಾಮಕೃಷ್ಣ ಮಾತನಾಡಿ, “ಮೋದಿ ಅವರು ಆರಂಭಿಸಿದ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್(IBCA) ಕೂಡ ಇದನ್ನು ಭವ್ಯ ಮಟ್ಟದಲ್ಲಿ ಸುಗಮಗೊಳಿಸುವ ಮತ್ತೊಂದು ಪ್ರಯತ್ನವೇ ಆಗಿದೆ. ಸಾಮಾಜಿಕ ನ್ಯಾಯದಲ್ಲಿ ಆಳವಾಗಿ ನೆಲೆಸಿದೆ ಎಂದು ಡಂಗೂರ ಹೊಡೆಯುವ ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರವೂ ಈ ವಿಷಯದಲ್ಲಿ ಯಾವುದೂ ವಿಭಿನ್ನವಲ್ಲ. ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರಗಳು ಸೇರಿ ಈ ಅನ್ಯಾಯದ ಮುಂದುವರಿಕೆಯನ್ನು ಮಾಡುವಲ್ಲಿ ಹಾಗೂ ನಮ್ಮ ಕಾಡುಗಳಿಂದ ಆದಿವಾಸಿ ಜನರನ್ನು ಬೇರು ಸಹಿತ ಕಿತ್ತೊಗೆಯುವಲ್ಲಿ ಸಮಾನ ಪಾಲುದಾರರಾಗಿವೆ” ಎಂದು ಹೇಳಿದರು.
“ಹೆಚ್ಚಾಗಿ ಪ್ರಚಾರಗೊಳ್ಳುವ ಕಾರ್ಬನ್-ಜೀವವೈವಿಧ್ಯ ಆಫ್‌ಸೆಟ್ಟಿಂಗ್ ಮತ್ತು ವನ್ಯಜೀವಿ ಪ್ರವಾಸೋದ್ಯಮಗಳು ವಾಸ್ತವದಲ್ಲಿ ಜಾಗತಿಕ ಮಾರುಕಟ್ಟೆಯ ಹಸಿರು ಹೊದಿಕೆ(Green washing) ಕಾರ್ಯಸೂಚಿಗಳಾಗಿದ್ದು, ಅವುಗಳು IBCAಯ ಸಂರಕ್ಷಣಾ ಪ್ರಚಾರದ ಅಡಿಯಲ್ಲಿ ಮರೆಮಾಡಲ್ಪಟ್ಟಿವೆ. ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಮೂಲನಿವಾಸಿ ಭೂಮಿಗಳು ಮತ್ತು ಜೀವ–ಜಗತ್ತುಗಳಿಂದ ಲಾಭ ಕಸಿದುಕೊಳ್ಳಲು IBCAಯ ಹೆಸರಿನಲ್ಲಿ NTCA ಹಾಗೂ WWF, WCS, CWS, ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂರಕ್ಷಣಾ ಗುಂಪುಗಳು ನಡೆಸುತ್ತಿರುವ ಗುಪ್ತ ತಂತ್ರಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಪ್ರತಿರೋಧಿಸುತ್ತೇವೆ” ಎಂದರು.

“ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಪ್ರದೇಶದ ಅನೇಕ ಹಾಡಿಗಳ ಮೂಲಕ ಆಯೋಜಿಸಲಾದ ಪಾದಯಾತ್ರೆಯ ನಂತರ, ಜನವರಿ 19ರಂದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ CERD ಸಮಿತಿ, ನಾಗರಹೊಳೆ ಹಾಗೂ ಭಾರತದಾದ್ಯಂತದ ಆದಿವಾಸಿ ಜನರು ಹಲವು ದಶಕಗಳಿಂದ ಪ್ರಸ್ತಾಪಿಸುತ್ತಿರುವ ಅದೇ ಅಪೂರ್ವ ಉಲ್ಲಂಘನೆಗಳನ್ನು ಗುರುತಿಸಿ ಹಾಗೂ ಅವುಗಳತ್ತ ಗಮನ ಸೆಳೆಯುವ ಪತ್ರವನ್ನು ಮೋದಿ ಸರ್ಕಾರಕ್ಕೆ ಹೊರಡಿಸಿದೆ. ಆದರೂ ಈವರೆಗೆ NTCA ಯಿಂದಾಗಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದಾಗಲಿ, ರಾಜ್ಯ ಸರ್ಕಾರವಾಗಲಿ, ಯಾವುದೇ ಸರ್ಕಾರಿ ಪ್ರಾಧಿಕಾರದಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಗ್ರಿನ್ ಕ್ರೆಡಿಟ್‌ಗಳ ಹೆಸರಿನಲ್ಲಿ ಪೀಳಿಗೆಗಳಿಂದ ನಮ್ಮಿಂದ ಕಸಿದುಕೊಳ್ಳಲ್ಪಟ್ಟಿರುವ ನಮ್ಮ ಸಾಂಪ್ರದಾಯಿಕ ಗಡಿಗಳು ಮತ್ತು ಪೂರ್ವಿಕರ ಕಾಡುಗಳೊಳಗೆ ಕಾಲಿಡುವಾಗ, 20ಕ್ಕೂ ಹೆಚ್ಚು ವಿವಿಧ ದೇಶಗಳಿಂದ ಈ ಶೃಂಗಸಭೆಗೆ ಆಗಮಿಸಿರುವ ಅಂತಾರಾಷ್ಟ್ರೀಯ ಸಂದರ್ಶಕರು ಈ ಪ್ರಶ್ನೆಗಳ ಕುರಿತು ಚಿಂತಿಸಲು ಅಥವಾ ಆತ್ಮಪರಿಶೀಲನೆ ಮಾಡಿಕೊಳ್ಳಲು ಮುಂದಾಗುವರೇ” ಎಂದು ಪ್ರಶ್ನಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಸಾಮಾಜಿಕ ನ್ಯಾಯದ ಹೋರಾಟಕ್ಕೆ ʼಅಹಿಂದ ಸಮಾವೇಶʼ ಅನಿವಾರ್ಯ: ಪ್ರಸ್ತುತ ಅಗತ್ಯತೆಯ ಅವಲೋಕನ

“ಇಲ್ಲದಿದ್ದರೆ, ನಾಗರಹೊಳೆಯಲ್ಲಿನ ಆದಿವಾಸಿ ಜನರಾದ ನಾವು, ನಾಗರಹೊಳೆಗೆ ಆಗಮಿಸುತ್ತಿರುವ ಅತಿಥಿಗಳು ನಮ್ಮ ಅನುಮತಿ ಇಲ್ಲದೆ ಸ್ಥಾಪಿಸಲಾದ ನಾಣಚ್ಚಿ ಅರಣ್ಯ ಚೆಕ್ ಪೋಸ್ಟ್ ಪ್ರವೇಶದ ಬಳಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುವ ಫಲಕವನ್ನು ಓದಿಕೊಳ್ಳುವಂತೆ ವಿನಂತಿಸುತ್ತೇವೆ” ಎಂದರು.
ಫಲಕದ ಬರಹ:
- ನಾಗರಹೊಳೆ ಕಾಡು ಬುಡಕಟ್ಟು ಮನೆತನಗಳ ಜಮ್ಮದ ತಾಣ.
"ನೀವು ಈಗ ಆದಿವಾಸಿಗಳ ಸಾಂಪ್ರದಾಯಿಕ ಗಡಿಯೊಳಗೆ ಪ್ರವೇಶಿಸುತ್ತಿದ್ದೀರಿ. ಈ ಕಾಡು ಆದಿವಾಸಿ ಬುಡಕಟ್ಟು ಜನರ ಆವಾಸಸ್ಥಾನ. ಈ ಆವಾಸಸ್ಥಾನದಲ್ಲಿ ಕಾಡು, ಪ್ರಾಣಿ ಮತ್ತು ಜನರು ಸಮಾನರು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿರುವ ಈ ಕಾಡು WLPA ACT, 1972 ಹಾಗೂ FRA ACT, 2006 ಕಾನೂನಿನ ಪ್ರಕ್ರಿಯೆಯನ್ನು ಪಾಲಿಸದೆ ಮತ್ತು ಗ್ರಾಮಸಭೆಗಳ ಒಪ್ಪಿಗೆ ಇಲ್ಲದೆ ಬಲವಂತವಾಗಿ ಘೋಷಿಸಲಾಗಿದೆ. ಈ ನಿರ್ಣಯವನ್ನು ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನ ಸಮಿತಿ, ಆದಿವಾಸಿಗಳ ಸಾಂಪ್ರದಾಯಿಕ ವ್ಯವಸ್ಥೆಯ ಗುಂಪು ಮತ್ತು ಗ್ರಾಮ ಸಭೆಗಳ ಒಕ್ಕೂಟವು ಈ ನಿರ್ಣಯವನ್ನು ಅಂಗೀಕರಿಸಿದೆ. ಈ ಪ್ರದೇಶದಲ್ಲಿ ಗೌರವ ಮತ್ತು ಘನತೆಯೊಂದಿಗೆ ನಡೆದುಕೊಳ್ಳಿ" ಎಂಬುದು ಫಲಕದಲ್ಲಿ ಅಡಕವಾಗಿದೆ.





