ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಧಾರವಾಡದಲ್ಲಿ ಇದುವರೆಗೂ ಉದ್ಯೋಗಾಕಾಂಕ್ಷಿಗಳ 3 ಬೃಹತ್ ಪ್ರತಿಭಟನೆಗಳು ನಡೆದಿವೆ. ಆ ಮೂರೂ ಹೋರಾಟಗಳಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಅನುಮತಿ ನಿರಾಕರಣೆಯ ನಡುವೆಯೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು, ಹಲವು ಸಂಘಟನೆಗಳ ನಾಯಕರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಉದ್ಯೋಗಾಕಾಂಕ್ಷಿಗಳು, ಹೋರಾಟಗಾರರು ಸರ್ಕಾರದ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಧಾರವಾಡದ ಪ್ರಮುಖ ಬೀದಿಗಳಲ್ಲಿ ಬ್ಯಾರಿಕೇಡ್ ನಿಲ್ಲಿಸಿ, ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಯುವಜನರ ನ್ಯಾಯಯುತ ಹೋರಾಟ ಹಾಗೂ ಪ್ರಜಾತಾಂತ್ರಿಕ ಹಕ್ಕಿನ ಮೇಲೆ ದಾಳಿ ಮಾಡಿರುವ ಪೊಲೀಸರು ಮತ್ತು ಸರ್ಕಾರದ ದಮನಕಾರಿ ನಡೆಯನ್ನು ಹಲವರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಪ್ರಶ್ನಿಸಿದರೆ ದೇಶದ್ರೋಹಿ ಎಂಬ ಪಟ್ಟ ಕಟ್ಟಿದ, ಪ್ರತಿಭಟನೆಗಳನ್ನು ಹತ್ತಿಕ್ಕಿದ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ, ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿ, ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತರುತ್ತದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಭರವಸೆಯ ಆಧಾರದ ಮೇಲೆ, ದಮನಿತರ ಧ್ವನಿಯಾಗುವ ಮಾತುಗಳ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡಾ ಅಂತಹದೇ ದಮನಕಾರಿ ನೀತಿಯನ್ನು ಅನುಸರಿಸುತ್ತಿರುವುದು ಶೋಚನೀಯ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯುವಜನರಿಗಾಗಿ ಉದ್ಯೋಗ ಸೃಷ್ಟಿ ಮಾಡದೇ ತಮ್ಮ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಏನೇನು ಮಾಡಬೇಕೋ ಅದನ್ನು ಮಾತ್ರ ಮಾಡಿಕೊಂಡಿವೆ. ನಿರುದ್ಯೋಗ ಮಟ್ಟ ಮುಗಿಲು ಮುಟ್ಟಿದ್ದರೂ ಸರ್ಕಾರಗಳು ಉದ್ಯೋಗ ಸೃಷ್ಟಿಯ ಬಗ್ಗೆ ಚಕಾರ ಎತ್ತುತ್ತಿಲ್ಲ.

ಉದ್ಯೋಗ ಪ್ರಶ್ನಿಸಿ ಪ್ರತಿಭಟಿಸಿದರೆ ಹೋರಾಟ ಹತ್ತಿಕ್ಕುವ ಮೂಲಕ ದಮನಕಾರಿ ನೀತಿ ಅನುಸರಿಸುವ ಸರ್ಕಾರಗಳ ನಿಜವಾದ ಉದ್ದೇಶವಾದರೂ ಏನೆಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ರಾಜಕಾರಣಿಗಳಿಗೆ ಉದ್ಯೋಗ ಬೇಕು, ಸರ್ಕಾರದ ಸಂಬಳ ಬೇಕು. ಯುವಕರು ಮಾತ್ರ ನಿರುದ್ಯೋಗಿಗಳಾಗಿಯೇ ಇರಬೇಕು ಎಂಬುದು ಯಾವ ನ್ಯಾಯ? ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವಂತೆ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತೆ, ಇದರಿಂದ ಸಮಾಜವು ಮತ್ತಷ್ಟು ಅಶಾಂತಿಯಲ್ಲಿ ಮುಳುಗುವಂತೆ ಸರ್ಕಾರಗಳೇ ಹಾದಿ ತೋರುತ್ತಿದೆಯೇ? ಸಂವಿಧಾನದ ಆಶಯಗಳ ಕುರಿತು ಮಾತನಾಡುತ್ತಾ ಹೋರಾಟಗಳ ಹತ್ತಿಕ್ಕುವ ಸಿಎಂ ಸಿದ್ದರಾಮಯ್ಯನವರಾಗಲೀ, ಉದ್ಯೋಗ ಕೇಳಿದರೆ ಪಕೋಡ ಮಾರಿ, ರೀಲ್ಸ್ ಮಾಡಿ ಹಣ ಗಳಿಸಿರಿ ಎಂದು ಯುವಕರಿಗೆ ಸಲಹೆ ನೀಡುವ ಪ್ರಧಾನಿ ಮೋದಿಯವರಾಗಲೀ ಯುವಜನತೆಗೆ ನೀಡುತ್ತಿರುವ ಸಂದೇಶವೇನು? ಎನ್ನುವುದು ಪ್ರಜ್ಞಾವಂತರ ಸದ್ಯದ ಪ್ರಶ್ನೆ.
ಈ ಬಗ್ಗೆ ಈದಿನ.ಕಾಮ್ ಜತೆಗೆ ಜನಾಂದೋಲನ ಮಹಾಮೈತ್ರಿಯ ರಾಜ್ಯ ಸಂಚಾಲಕ ಉಗ್ರನರಸಿಂಹೆಗೌಡ ಮಾತನಾಡಿ, “ಉದ್ಯೋಗ ಕೇಳಿದರೆ ಲಾಟಿ ಬೀಸುವುದು ಯಾವುದರ ಲಕ್ಷಣ ಎಂದು ಸರ್ಕಾರಗಳೇ ಹೇಳಬೇಕು. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವು ಕೋವಿಡ್ ನೆಪ ಮುಂದೆ ಮಾಡಿ ಯಾವುದೇ ನೇಮಕಾತಿಗಳನ್ನು ಮಾಡಲಿಲ್ಲ. ಬದಲಿಗೆ ಅವರ ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ನಂತರ ತಾನು ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ ಕೂಡ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದರೂ ನೇಮಕಾತಿ ಮಾಡುತ್ತಿಲ್ಲ. ಬದಲಿಗೆ ಒಳ ಮೀಸಲಾತಿಯ ನೆಪ ಹೂಡಿ ಸಮಯ ತಳ್ಳುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಸಹ ಖಾಲಿಯಿರುವ 10 ಲಕ್ಷ ಹುದ್ದೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂಬುದು ಕೂಡ ಬರೀ ಚುನಾವಣಾ ಜುಮ್ಲಾ ಆಗಿದೆ. ಯುವಜನರನ್ನು ವಿವಿಧ ಪಕ್ಷಗಳು ತಮ್ಮ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿವೆ. ಕೆಲಸ ಮಾಡಲು ಯಾರೂ ಮುಂದಾಗುತ್ತಿಲ್ಲ” ಎಂದು ಅಸಾಮಾಧಾನ ವ್ಯಕ್ತಪಡಿಸಿದರು.


ಭಾರತೀಯ ಕೃಷಿಕ ಸಮಾಜದ ಮುಖಂಡ ಸಿದ್ದಗೌಡ ಮೋದಗಿ ಮಾತನಾಡಿ, “ರಾಜ್ಯದಲ್ಲಿ 2,65,000 ಹುದ್ದೆಗಳು ಖಾಲಿಯಿವೆ. ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಇದೀಗ ಉದ್ಯೋಗಾಕಾಂಕ್ಷಿ ಹೋರಾಟವನ್ನು ದಮನ ಮಾಡುವ ಮೂಲಕ ವಿದ್ಯಾರ್ಥಿಗಳ ಕನಸನ್ನು ಹರಣ ಮಾಡುವ ಯತ್ನದಲ್ಲಿರುವುದು ಶೋಭೆ ತರುವುದಿಲ್ಲ. ಈಗಾಗಲೇ ನಡೆಯುತ್ತಿರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚಿಂತಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಭವಾನಿಶಂಕರ್ ಗೌಡ ಮಾತನಾಡಿ, “ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಲವು ದಿನಗಳಿಂದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನಾ ಧರಣಿಯು ಪ್ರಜಾತಾಂತ್ರಿಕ ಮೌಲ್ಯಗಳ ಆಧಾರದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಆದರೆ; ಹೋರಾಟವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಉದ್ಯೋಗ ಕೊಡಿ ಎಂದು ಕೇಳುವುದು ಯುವಜನರ ಹಕ್ಕು. ಕೇಂದ್ರ ಮತ್ತು ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸಹ 5-6 ವರ್ಷಗಳಿಂದ ಸರ್ಕಾರಗಳು ನೇಮಕಾತಿಗಳನ್ನು ಮಾಡದೆ ಇರುವುದು ಅತ್ಯಂತ ಅಕ್ಷಮ್ಯ” ಎಂದು ಆಕ್ರೋಶಗೊಂಡರು.
ಈ ಕುರಿತು ಹೋರಾಟ ಸಮಿತಿಯ ನೀತುಶ್ರೀ ಮಾತನಾಡಿ, “ಕಳೆದ ಡಿಸೆಂಬರ್ 1 ರಂದು ನಡೆದ ಪ್ರತಿಭಟನೆಯಲ್ಲಿ ನನ್ನನ್ನು ಬಂಧಿಸಲಾಗಿತ್ತು. ಉದ್ಯೋಗ ಕೇಳಿದರೆ ಬಂಧಿಸುವ ಸರ್ಕಾರದ ನಡೆಯು ಸಂವಿಧಾನ ವಿರೋಧಿಯಾಗಿದೆ ಮತ್ತು ಪ್ರಜಾಪ್ರಭುತ್ವ ಅಂತ ಅನಿಸುತ್ತಿಲ್ಲ. ಪೊಲೀಸರು ಕೇಳಿದ ಮಾಹಿತಿಯನ್ನು ಹಲವು ಬಾರಿ ನೀಡಿದ್ದಾಗಿಯೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಮತ್ತು ಇದೀಗ ಯುವಜನರ ನ್ಯಾಯಯುತ ಹೋರಾಟವನ್ನು ಬೆಂಬಲಿಸಲು ಬಂದ ನಾಯಕರುಗಳನ್ನೂ ಬಂಧಿಸಿದ್ದಾರೆ. ಧಾರವಾಡ ಸೇರಿದಂತೆ ರಾಜ್ಯದ ವಿದ್ಯಾರ್ಥಿ- ಯುವಜನರು, ಹಾಗೂ ಪ್ರಜ್ಞಾವಂತ ಜನ ಸಮೂಹವು ಒಂದಾಗಿ ಸರ್ಕಾರದ ಈ ನಿರಂಕುಶ ಧೋರಣೆಯ ವಿರುದ್ಧ ಧ್ವನಿಯೆತ್ತಬೇಕು ಮತ್ತು ಪ್ರಜಾತಾಂತ್ರಿಕ ಹಕ್ಕಿನ ರಕ್ಷಣೆಗಾಗಿ ನಾವು ನಿರಂತರ ಹೋರಾಡಬೇಕು. ಉದ್ಯೋಗವು ನಮ್ಮ ಹಕ್ಕಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ತನಕ ಹೋರಾಟಗಳು ಮುಂದುವರೆಯುತ್ತವೆ” ಎಂದರು.

ಇದನ್ನೂ ಓದಿ: ಧಾರವಾಡ | ಡಿ. 14ಕ್ಕೆ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿನಂದನೆ, ಸಂವಾದ ಕಾರ್ಯಕ್ರಮ
ಧಾರವಾಡದ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿರುವ ಯುವಜನರ ಕೂಗು ಒಂದು ಹಕ್ಕಿನ ಬೇಡಿಕೆ ಮಾತ್ರವಲ್ಲ, ಅದು ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಗಟ್ಟಿ ಆಗ್ರಹ. ಮತ್ತೊಂದೆಡೆ, ಸರ್ಕಾರದ ನಡೆಯು, ಯುವಕರು ತಮ್ಮ ಶೈಕ್ಷಣಿಕ ಹಾದಿಯಲ್ಲಿ ಹೂಡಿದ ಸಮಯ, ವರ್ಷಗಳ ಪರಿಶ್ರಮ ಮತ್ತು ಕೆಲಸದ ಕನಸುಗಳನ್ನು ಕಾಪಾಡಿಕೊಳ್ಳಲು ಮಾಡಿದ ಹೋರಾಟಗಳಿಗೆ ಬೆಲೆ ಇಲ್ಲವೇ ಎನ್ನುವಷ್ಟು ಹತಾಷೆ ಮೂಡಿಸುತ್ತಿದೆ. ಹೋರಾಡುವುದು ಹಕ್ಕು. ಆ ಹಕ್ಕನ್ನು ಪ್ರಯೋಗಿಸಿದಾಗ ಬಂಧನ, ಗೃಹಬಂಧನ, ಅನುಮತಿ ನಿರಾಕರಣೆ… ಇವೆಲ್ಲ ಎದುರಾಗುತ್ತಿರುವುದು, ಆಡಳಿತ ವರ್ಗದ ನೈಜ ಮನೋಭಾವವನ್ನು ಸಹಜವಾಗಿ ಪ್ರಶ್ನಿಸುವಂತೆ ಮಾಡುತ್ತವೆ. ಭಾರತ ಯುವ ರಾಷ್ಟ್ರ ಎನ್ನುವುದು ಭವಿಷ್ಯದ ಭಾರವನ್ನೂ ಒಳಗೊಂಡಿದೆ. ಆ ಭವಿಷ್ಯವನ್ನು ಹೊತ್ತಿರುವ ಯುವಜನತೆ ಇಂದು ಹೋರಾಟದ ವೇದಿಕೆಗಳಲ್ಲಿ ನಿಂತಿದ್ದಾರೆ. ಸರ್ಕಾರಗಳು ಈ ಕೂಗನ್ನು ಕೇಳದೆ, ಉದಾಸೀನವಾಗಿದ್ದರೆ, ಅದರ ಬೆಲೆ ಮುಂದಿನ ವರ್ಷಗಳಲ್ಲಿ ಸಮಾಜವೇ ಕಟ್ಟಬೇಕಾದೀತು.





