ಜಮೀಯ್ಯತುಲ್ ಫಲಾಹ್ ದ.ಕ., ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕದ ವತಿಯಿಂದ ಇಂದು ಉಡುಪಿಯ ಜಾಮಿಯಾ ಮಸೀದಿಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಉಡುಪಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಬಡಿಗಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಯುವಜನತೆ ಮಾದಕ ವ್ಯಸನದ ಬಲೆಗೆ ಸಿಲುಕುತ್ತಿರುವುದು ಗಂಭೀರ ವಿಷಯ. ಶಿಕ್ಷಣ, ಕುಟುಂಬ ಮತ್ತು ಧಾರ್ಮಿಕ ಸಂಸ್ಥೆಗಳು ಈ ಕುರಿತು ಜಾಗೃತಿ ಮೂಡಿಸಲು ಕೈಜೋಡಿಸಬೇಕು. ನಶಾ ವಸ್ತುಗಳಿಂದ ದೂರವಿದ್ದು ಸಕಾರಾತ್ಮಕ ಬದುಕು ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಮಾದಕ ವ್ಯಸನ ತಡೆಯಲು ಸಮಾಜ ಒಗ್ಗೂಡಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಅವರು ಮಾತನಾಡಿ, ಅಂಕಗಳನ್ನು ಪಡೆಯುವುದು ಕೇವಲ ಪರೀಕ್ಷೆ ಪಾಸಾಗುವುದಕ್ಕಷ್ಟೇ ಅಲ್ಲ, ಶಿಕ್ಷಣವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಅದನ್ನು ಬಳಸಿಕೊಂಡು ಸಮಾಜದ ಒಳಿತಿಗೆ ಸೇವೆ ಸಲ್ಲಿಸುವ ಮಾನವೀಯ ಮೌಲ್ಯಗಳು ನಮ್ಮೊಳಗೆ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ನಜೀರ್ ನೇಜಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಸಮೀರ್ ಧನ್ಯವಾದ ಸಲ್ಲಿಸಿದರು. ಫಾಜೀಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸುಮಾರು 58 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.






