ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುವ ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಕ್ರಾಸ್ ಬಳಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಯಿತು.
ಯುವ ಮುಖಂಡ ರಾಜು ನದಾಫ್ ಮಾತನಾಡಿ, “ಕೃಷಿ ಖರ್ಚು ತುಂಬಾ ಹೆಚ್ಚಾಗಿದ್ದು, ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಆದ್ದರಿಂದ ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿಗೊಳಿಸಬೇಕು. ಈ ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ. ಸದ್ಯ ನಿಗದಿಯಾಗಿರುವ ಎಫ್‌ಆರ್‌ಪಿ ದರವನ್ನು ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಕ್ಟೋಬರ್ 25ರೊಳೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಎಫ್‌ಆರ್‌ಪಿ ಹೊರತುಪಡಿಸಿ ದರ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಈವರೆಗೆ ಯಾವುದೇ ರೀತಿಯ ಕ್ರಮವಾಗಿಲ್ಲ” ಎಂದು ಹೇಳಿದರು.
ರೈತ ಯುವ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, “ಒಂದು ಟನ್ ಕಬ್ಬಿನಿಂದ ಸಕ್ಕರೆ ಜತೆಗೆ ಸ್ಪಿರಿಟ್ ಮೊಲ್ಯಸಿಸ್, ಬಗಾಸ್ ಮೊದಲಾದ ಉಪ ಉತ್ಪನ್ನಗಳಿಂದಲೂ ಸಕ್ಕರೆ ಕಾರ್ಖಾನೆಗಳು ಲಾಭ ಪಡೆಯುತ್ತವೆ. ಆದರೂ, ರೈತರಿಗೆ ಬಿಲ್ ನೀಡುವಲ್ಲಿ ಸತಾಯಿಸುತ್ತವೆ. ಜತೆಗೆ ರೈತರನ್ನು ಸುಲಿಗೆ, ಮೋಸ ಮಾಡುವುದು ತಪ್ಪುತ್ತಿಲ್ಲ. ಇದಲ್ಲದೆ, ಅಕ್ಕಪಕ್ಕದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಬೆಲೆಯಾದರೆ, ನಮ್ಮ ಜಿಲ್ಲೆಯಲ್ಲೇ ಒಂದು ಬೆಲೆಯಾಗಿದೆ. ಇದು ಈ ಭಾಗದ ರೈತರ ದುರಾದೃಷ್ಟ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ರೈತ ಸಂಘದ ಜಿಲ್ಲಾ ನಾಯಕಿ ಶ್ರೀಶೈಲ ಭೂಮಾರ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ರೈತ ಮುಖಂಡರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ವಕೀಲರ ಸಂಘ, ಸಾಧು ಸಂತರ ಸಂಘ, ಭಾರತೀಯ ಕಿಸಾನ್ ಸಂಘ, ಜಿಲ್ಲೆಯ ಪ್ರಗತಿಪರ ಹೋರಾಟಗಾರರೆಲ್ಲರೂ ಕಬ್ಬು ಬೆಳೆಗಾರರ ಹೋರಾಟಕ್ಕೆ ನೈತಿಕವಾಗಿ ಬೆಂಬಲ ಸೂಚಿಸಿ ಮಾತನಾಡಿದರು.
ಈ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಂಚೂಣಿ ನಾಯಕರಾದ ಸಿದ್ದಪ್ಪ ಬಣಗಾನವರ, ಬಾಹುಬಲಿ ನ್ಯಾಮಗೌಡ, ಪರಸು ಸಾಟೆ, ಶಿವಾಜಿ ಕದಂ ಹಾಗೂ ಕಾರ್ಯಕರ್ತರು ಇದ್ದರು.





