ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೃತಪಟ್ಟ ಯುವಕರನ್ನು ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಹಾಗೂ ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.
ಸಿದ್ದಾಪುರ ಬಳಿಯಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರ್ಯಾಕ್ಟರನ್ನು ಬಿಜಾಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ಕೆಳಗಡೆ ಕಾರು ಸಿಲುಕಿದ್ದು, ಅದರಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಕೊನೆಯುಸಿರೆಳೆದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಕಬ್ಬು ಬೆಳೆಗಾರ ಜೊತೆಗಿನ ಸಂಧಾನ ಯಶಸ್ವಿ, ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ
ಸ್ಥಳಕ್ಕೆ ಆಗಮಿಸಿದ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು, ಟ್ರ್ಯಾಕ್ಟರ್ ಕೆಳಗಡೆ ಸಿಲುಕಿಕೊಂಡಿದ್ದ ಕಾರಿನಲ್ಲಿದ್ದ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





