ಕೇಂದ್ರದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ತರುವಾಯ ದಿನೇದಿನೆ ದಲಿತ ಸಮುದಾಯದ ಮೇಲಿನ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರಗಳು ಉಲ್ಪಣಿಸುತ್ತಿವೆ. ದಲಿತ ಸಮುದಾಯವನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ವ್ಯವಸ್ಥಿತವಾಗಿಯೇ ಸದೆಬಡೆಯಲಾಗುತ್ತಿದೆ. ಇಂತಹ ಆರ್‌ಎಸ್‌ಎಸ್ ಕಾನೂನು ಬಾಹಿರ ನಡೆಯನ್ನು ವಿರೋಧಿಸಿ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು. ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿ ಅವರು ಮತ್ತು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ ಜೆ ಸಾಗರ ಬಣ) ಆರೋಪಿಸಿದೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಆಡಳಿತ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದು, ಬಳಿಕ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
“ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ಬಿ ಆರ್ ಗವಾಯಿಯವರ ಮೇಲೆ ಮನುವಾದಿ, ಜಾತಿವಾದಿ ಮಂತಾಂಧ ವಕೀಲನೊಬ್ಬ ಶೂ ಎಸೆಯುವ ಮೂಲಕ ದೇಶದ್ರೋಹಿ ಕೃತ್ಯ ಎಸೆಗಿದ್ದಾನೆ. ಇದು ಒಂದು ರೀತಿಯಲ್ಲಿ ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನೇರ ದಾಳಿಯಾಗಿದೆ. ದಲಿತರು ಉನ್ನತ ಹುದ್ದೆಯಲ್ಲಿರುವುದನ್ನು ಮನುವಾದಿಗಳು ಸಹಿಸುವುದಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಕೋಮುವಾದಿ ಮನಸ್ಥಿತಿಯ ವಕೀಲನೊಬ್ಬ ಸಾರ್ವಜನಿಕವಾಗಿ ಡಾ. ಬಾಬಾಸಾಹೇಬರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತ, ಅವರು ಸಂವಿಧಾನವನ್ನೇ ಬರೆದಿಲ್ಲವೆಂದು ರಾಷ್ಟ್ರವಿರೋಧ ಮಾತುಗಳನ್ನಾಡಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭಾರತ ಸಂವಿಧಾನವನ್ನು ಗೌರವಿಸದ, ಐವತ್ತೈದು ವರ್ಷಗಳ ಕಾಲ ತನ್ನ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಈವರೆಗೂ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದಿರುವ ಆರ್‌ಎಸ್‌ಎಸ್ ಅನಧಿಕೃತ ಆದಾಯದ ಮೂಲಗಳನ್ನು ಹೊಂದಿದೆ. ಈವರೆಗೂ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಿದ, ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆರ್‌ಎಸ್‌ಎಸ್ ಸಂಘಟನೆ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ವರ್ತಿಸಬೇಕು. ಇಲ್ಲವಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿದ ಕಾರಣಕ್ಕಾಗಿ, ಕೆಲವು ಕೋಮುವಾದಿ ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕ್ ಖರ್ಗೆಯವರಿಗೆ, ಅವರ ಕುಟುಂಬ ಸದಸ್ಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತ, ಜೀವಬೆದರಿಕೆ ಹಾಕಲಾಗುತ್ತಿದೆ. ಪಿಯಾಂಕ್ ಖರ್ಗೆ ಅವರ ರಾಜಕೀಯ ಏಳಿಗೆಯನ್ನು ಸಹಿಸದ ಮನುವಾದಿಗಳು, ದಲಿತ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಪಿಯಾಂಕ್ ಖರ್ಗೆ ಅವರನ್ನು ಉದ್ದೇಶ ಪೂರ್ವಕವಾಗಿ ಅವಮಾನಿಸುತ್ತಿದ್ದಾರೆ. ಇದು ಖಂಡನಾರ್ಹ, ಮನುವಾದಿಗಳ ಈ ದೋರಣೆಯು ದಲಿತ ಸಮುದಾಯ ವಿರೋಧಿಯಾಗಿರುವುದರಿಂದ, ದಲಿತ ಸಮುದಾಯವು ಸಂಘಟನಾತ್ಮಕವಾಗಿ ಕೋಮುವಾದಿ ಆರ್‌ಎಸ್‌ಎಸ್ ಸಂಘಟನೆಯನ್ನು ಪ್ರತಿರೋಧಿಸಬೇಕಿದೆ” ಎಂದು ಕರೆ ನೀಡಿದರು.
“ನಾಳೆ ಮುಂದಿನ ತಲೆಮಾರಿನ ಉತ್ತಮ ಭವಿಷ್ಯಕ್ಕಾಗಿ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಮನುವಾದಿಗಳಿಂದ ಸಂರಕ್ಷಿಸುವುದು ಸಮಸ್ತ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ಮನುವಾದಿ ಆರ್‌ಎಸ್‌ಎಸ್ ಸಂಘಟನೆಯ ದಲಿತ ವಿರೋಧಿ ನಿಲುವನ್ನು ಖಂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ರಾಜ್ಯದ ತುಂಬಾ ಹೋರಾಟ ಹಮ್ಮಿಕೊಂಡಿದೆ. ಭಾರತ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವ ನಾಗರಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ ದಲಿತ ಸಂಘರ್ಷ ಸಮಿತಿಯು ಹಮ್ಮಿಕೊಂಡಿರುವ ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ, ಸಂವಿಧಾನ ಬದಲಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸಲು ಹೊಂಚುಹಾಕುತ್ತಿರುವ ಮನುವಾದವನ್ನು ಖಂಡಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಹೆಚ್ಚು ಬಳಕೆಯಾಗಲಿ : ನಾಗಪ್ಪ ಜಾನಕನೂರ್
“ಬ್ರಿಟಿಷ್ ಅಧಿಕಾರಿಯನ್ನು ಸ್ವಾಗತಿಸಲು ಭಾರತದ ರಾಷ್ಟ್ರಗೀತೆ ಬರೆಯಲಾಗಿತ್ತೆಂಬ ಬಿಜೆಪಿ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಅಸಂಬದ್ಧ. ಇದು ರಾಷ್ಟ್ರವಿರೋಧಿ ಹೇಳಿಕೆಯಾಗಿದೆ. ಹಾಗಾಗಿ ಇವರನ್ನು ಕೂಡಲೇ ಬಂಧಿಸಿ, ಜೈಲಿಗೆ ಹಾಕಬೇಕೆಂದು ಸರ್ಕಾರಕ್ಕೆ ಸಮಿತಿಯು ಒತ್ತಾಯಿಸುತ್ತ ಆರ್‌ಎಸ್‌ಎಸ್‌ನ ಕಾನೂನು ಬಾಹಿರ ನಡೆಯನ್ನು ವಿರೋಧಿಸಿ ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸಿ ರಾಜ್ಯಾದ್ಯಂತ ಪ್ರತಿಭಟನಾ ಮರೆವಣಿಗೆ-ಧರಣಿಯನ್ನು ನಡೆಸಲಾಗಿದೆ” ಎಂದರು.
ಬಾಗಲಕೋಟೆ ಜಿಲ್ಲಾ ಸಂಚಾಲಕರು ಜಿಲ್ಲಾ ಸಂಘಟನಾ ಪ್ರಗತಿಪರ ಚಿಂತಕರು ಪರಶುರಾಮ ಕಾಂಬಳೆ, ಬಸವರಾಜ ಹಳ್ಳದಮನಿ, ಮಹಾಲಿಂಗಪ್ಪ ಆಲಬಾಳ, ತಾಲೂಕು ಸಂಚಾಲಕರಾದ ಬಸವರಾಜ ದೊಡ್ಡಡಮನಿ, ಸದಾಶಿವ ಐನಾಪೂರ, ಪರಶು ಕಾಂಬಳೆ, ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಸೇರಿದಂತೆ ವಲಯ ಸಂಚಾಲಕ ಅಮಿತ್ ಸೂರಗೊಂಡ, ಸಾವಳಗಿ ದೀಪಕ ಕಂಕನವಾಡಿ, ಅಪ್ಪಸಿ ಕಾಂಬಳೆ, ವಿದ್ಯಾಸಾಗರ ಹೊಸಮನಿ, ಶ್ಯಾಮರಾವ ಮಾದರ, ಕೃಷ್ಣಾ ಶೆಗುಣಸಿ, ಹುಲ್ಲಪ್ಪ ಅಂಟರಠಾಣಾ, ಚಿನ್ನಪ್ಪ ಬಂಡಿವಡ್ಡರ, ರವಿ ಸುತಾರ, ಶಂಕರ ಹೊಸಮನಿ, ಅಶೋಕ ಸಿಂಘೆ, ಅಡಿವೆಪ್ಪ ಮರೆಗುದ್ದಿ, ಮುತ್ತು ಹರಿಜನ, ಅನಿಲ ತಿಕೊಟಾ ಇನ್ನೂ ಮುಂತಾದ ನೂರಾರು ಕಾರ್ಯಕರ್ತರು ಇದ್ದರು.





