ಉನ್ನತ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ವೇಳೆ ಜನಿವಾರ ಧರಿಸಿ ಹಾಜರಾಗುವ ವಿಚಾರವಾಗಿ ವಿವಾದ ಸೃಷ್ಟಿಸಿದ್ದ ವಿದ್ಯಾರ್ಥಿ ಸುಚಿವ್ರತ ಕುಲಕರ್ಣಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್‌ಗೆ ಕುಲಕರ್ಣಿ ಪಡೆದಿರುವ ರ್‍ಯಾಂಕ್ ಕಾರಣವಾಗಿದೆ.
ಶನಿವಾರ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಬೀದರ್‌ನ ಸುಚಿವ್ರತ ಕುಲಕರ್ಣಿ ಅವರು 2.06 ಲಕ್ಷದ ರ್‍ಯಾಂಕ್ ಪಡೆದಿದ್ದಾರೆ. ಹೀಗಾಗಿ, ಲಕ್ಷಗಳಷ್ಟು ಹಿಂದಿನ ರ್‍ಯಾಂಕ್ ಗಳಿಸುವ ಬಗ್ಗೆ ತಿಳಿದೇ, ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಜನಿವಾರ ವಿವಾದ ಸೃಷ್ಟಿಸಿರಬೇಕೆಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.
ವಿದ್ಯಾರ್ಥಿ ಸುಚಿವ್ರತ ಕುಲಕರ್ಣಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 56% ಅಂಕ ಗಳಿಸಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳಲ್ಲಿ ಗಳಿಸಿದ್ದ ಅಂಕಗಳು ಮತ್ತು ಸಿಇಟಿಯಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದಿರುವ ಅಂಕಗಳನ್ನು ಒಟ್ಟುಗೂಡಿಸಿ ಅವರಿಗೆ 2,00,006ನೇ ರ್‍ಯಾಂಕ್ ನೀಡಲಾಗಿದೆ.
ಬೀದರ್‌ನಲ್ಲಿ ಸಿಇಟಿ ಬರೆಯಲು ಸುಚಿವ್ರತ ಕುಲಕರ್ಣಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾಗ, ಆತನಿಗೆ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಪರೀಕ್ಷಾ ಸಿಬ್ಬಂದಿ ಸೂಚಿಸಿದ್ದರು. ಆದರೆ, ಜನಿವಾರ ತೆಗೆಯಲು ಕುಲಕರ್ಣಿ ನಿರಾಕರಿಸಿದ್ದರು. ಅದಕ್ಕೂ ಮುನ್ನವೇ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಕುಲಕರ್ಣಿಗೆ ವಿವಾದದಿಂದಾಗಿ ಮತ್ತೊಂದು ವಿಷಯದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
ಪರೀಕ್ಷಾ ಕೇಂದ್ರದಲ್ಲಾದ ಗೊಂದಲದಿಂದ ಪರೀಕ್ಷೆ ಬರೆಯಲಾಗದ ಕುಲಕರ್ಣಿ ಮತ್ತು ಅವರ ತಾಯಿಯೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಮಾತನಾಡಿದ್ದರು. ಅವರ ಮುಂದೆ ಎರಡು ಆಯ್ಕೆ ಇಟ್ಟಿದ್ದರು. 1) ಪರೀಕ್ಷೆ ಬರೆಯುವುದು. 2) ಸರಾಸರಿ ಅಂಕದ ಆಧಾರದ ಮೇಲೆ ರ್‍ಯಾಂಕ್ ನೀಡುವುದು. ವಿದ್ಯಾರ್ಥಿ ಕುಲಕರ್ಣಿ 2ನೇ ಆಯ್ಕೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಸಚಿವ ಸುಧಾಕರ್ ಅವರೇ ಮಾಹಿತಿ ನೀಡಿದ್ದರು.
ವಿದ್ಯಾರ್ಥಿಯ ಆಯ್ಕೆಯಂತೆ ಪಿಯುಸಿ ಮತ್ತು ಸಿಇಟಿ ಅಂಕಗಳನ್ನು ಪರಿಗಣಿಸಿ, ಸರಾಸರಿ ಅಂಕದೊಂದಿಗೆ 2,00,006ನೇ ರ್‍ಯಾಂಕ್ ನೀಡಲಾಗಿದೆ.
ಈ ಲೇಖನ ಓದಿದ್ದೀರಾ?: ಹಾರೋಹಳ್ಳಿ | ಬನವಾಸಿಯಲ್ಲಿ ಅಸ್ಪೃಶ್ಯತೆ ಆಚರಣೆ: ರಾಜಿ, ಮಾತುಕತೆ ನೆಪದಲ್ಲಿ ಆರೋಪಿಗಳ ರಕ್ಷಣೆ
ಆತನ ಫಲಿತಾಂಶ ಬಂದ ಬೆನ್ನಲ್ಲೇ, ಆತನನ್ನು ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ. “ಮುಂದಿನ ಸಾರಿ ಎಲ್ಲರೂ ಏನಾದ್ರು ನೆಪ ಇಟ್ಕೊಂಡು ಪರೀಕ್ಷೆಗೆ ಗೈರಾಗೋದು ಒಳ್ಳೇದು. ರ್‍ಯಾಂಕ್ ಬರುತ್ತೇವೆ. ಪುಕ್ಸಟ್ಟೆ ಮೀಸಲಾತಿ ನೋಡಿ ಇದು” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
“ಕುಣಿಯೋಕೆ ಬರದವರು ನೆಲ ಡೊಂಕು ಎಂದರಂತೆ, ಜನಿವಾರ ಹೆಚ್ಚು ದಿನ ಬಾಳಿಕೆ ಬರೊಲ್ಲ. ಸುಳ್ಳು ಯಾವತ್ತೂ ಸತ್ಯವಾಗಲ್ಲ” ಎಂಬಿತ್ಯಾದಿಯಾಗಿ ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.
ಆದಾಗ್ಯೂ, “ರ್‍ಯಾಂಕ್‌ಗೂ ಜನಿವಾರಕ್ಕೂ ಏನೂ ಸಂಬಂಧ. ಇಂತಹ ವಿಚಾರಗಳನ್ನು ಮುನ್ನೆಲೆ ತಂದು ವಿದ್ಯಾರ್ಥಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಬೇಡಿ” ಎಂದು ಕೆಲವರು ಕಿವಿ ಮಾತು ಹೇಳಿದ್ದಾರೆ.




