“ಧರ್ಮ, ಮತ, ಜಾತಿ, ಭಾಷೆಗಳ ಅಂತರ ಅಳಿದು, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಸಮಾಜದ ಕಡೆಗೆ ಸಾಗುವ ಮೂಲಕ ಸಮಾಜವಾದಿ ಸಾರ್ವಭೌಮ ರಾಷ್ಟ್ರದ ಪ್ರಜೆಗಳಾಗಿ ನಾವು ಒಂದೇ ದೇಶವಾಗಿ ಬದುಕುವುದಾಗಿ ನಮಗೆ ನಾವೇ ಮಾತುಕೊಟ್ಟು ಘೋಷಿಸಿಕೊಂಡ ದಿನವೇ ಗಣರಾಜ್ಯೋತ್ಸವ. ಇದು ನಮ್ಮ ಹೊಸ ಬದುಕಿನ ಬದಲಾವಣೆಯ ಹೆಗ್ಗುರುತು,” ಎಂದು ಹಿರಿಯಡಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಹೇಳಿದರು.
77ನೇ ಗಣರಾಜ್ಯೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಳಿಕ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ ಸ್ವಾಗತ ಭಾಷಣ ಮಾಡಿದರು. ಅಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿ ನಿಶ್ಚಿತ ಎಸ್. ಹೋಬಳಿದಾರ್ ವಂದಿಸಿದರು. ವಿದ್ಯಾರ್ಥಿ ನಾಯಕ ಈರಬಸು ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





