ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕರಾಗಿ ಅಸಹಕಾರ ಚಳುವಳಿ ಮತ್ತು ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬ್ರಿಟಿಷರ ಜೈಲು ಶಿಕ್ಷೆಯನ್ನುಂಡವರೂ, ಜಾಮೀಯ ಮಿಲೀಯಾ ವಿಶ್ವವಿದ್ಯಾನಿಲಯದ ಸ್ಥಾಪಕರೂ, ಶಿಕ್ಷಣ ತಜ್ಞರೂ ಹಾಗೂ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಭಾರತದ ಶೈಕ್ಷಣಿಕ ಜಗತ್ತಿಗೆ ಭದ್ರಬುನಾದಿ ಹಾಕಿದವರೂ, ಹಿಂದು, ಮುಸ್ಲಿಂ ಭಾವೈಕ್ಯತೆಯ ಪ್ರತಿಪಾದಕರಾಗಿ ಅಖಂಡ ಭಾರತದ ಕನಸು ಕಂಡವರೂ ಆದ ಮೌಲಾನ ಅಬುಲ್ ಕಲಾಮ್ ಅಜಾದ್ ಅವರ ಬದುಕು ಮತ್ತು ಹೋರಾಟಗಳು ಯುವಕರಿಗೆ ಸದಾಸ್ಫೂರ್ತಿದಾಯಕ ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಹೇಳಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ ಸಿ. ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಉಪಾಧ್ಯಕ್ಷೆ ಕು. ವೈಷ್ಣವಿ ವಂದಿಸಿದ ಈ ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ ಯು ನಿರೂಪಿಸಿದರು





