ಜೋಯಿಡಾ: ಪ್ರವಾಸೋದ್ಯಮದ ಹೆಸರಿನಲ್ಲಿ ಮಿತಿಮೀರುತ್ತಿರುವ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿರುವ ಹೋಂಸ್ಟೇಗಳ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗವೇಗಾಳಿ ಗ್ರಾಮಸ್ಥರು ನಡೆಸಿದ ಕಾನೂನು ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.
ಗ್ರಾಮಸ್ಥರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡದ ಹೈಕೋರ್ಟ್ ಪೀಠವು, ಮುಂದಿನ 12 ವಾರಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.
ಸಮಸ್ಯೆಯ ಹಿನ್ನೆಲೆ ಏನು? ಗವೇಗಾಳಿ ಗ್ರಾಮದ ಸುತ್ತಮುತ್ತ ಸುಮಾರು 30ರಿಂದ 40ಕ್ಕೂ ಹೆಚ್ಚು ಹೋಂಸ್ಟೇಗಳು ತಲೆ ಎತ್ತಿವೆ. ಪ್ರವಾಸೋದ್ಯಮದ ನೆಪದಲ್ಲಿ ಹೊರಗಿನಿಂದ ಬಂದ ಉದ್ಯಮಿಗಳು ಸ್ಥಳೀಯರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಪ್ರಮುಖ ದೂರಾಗಿದೆ.
ರಾತ್ರಿ ವೇಳೆ ಕಿವಿಗಡಚಿಕ್ಕುವ ಡಿಜೆ ಸೌಂಡ್, ಪ್ರವಾಸಿಗರ ಅತಿಯಾದ ಕೂಗಾಟ, ಪಟಾಕಿ ಸಿಡಿಸುವಿಕೆ ಹಾಗೂ ನಿಯಮಬಾಹಿರ ಚಟುವಟಿಕೆಗಳಿಂದಾಗಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನರ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿಂದೆ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ತಹಶೀಲ್ದಾರ್, ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರು.
ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅನಿವಾರ್ಯವಾಗಿ ಧಾರವಾಡ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸಾರ್ವಜನಿಕರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಕೇವಲ ಮಾನವರಿಗಷ್ಟೇ ಅಲ್ಲದೆ, ಹೋಂಸ್ಟೇಗಳ ಅತಿಯಾದ ಶಬ್ದದಿಂದ ಕಾಡು ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಶಬ್ದದ ಅಬ್ಬರಕ್ಕೆ ಹೆದರುವ ಪ್ರಾಣಿಗಳು ಗ್ರಾಮದತ್ತ ನುಗ್ಗಿ, ಕೃಷಿ ಭೂಮಿಯನ್ನು ಹಾನಿ ಮಾಡುತ್ತಿವೆ. ಅಷ್ಟೇ ಅಲ್ಲದೆ ಊರಿಗೆ ನುಗ್ಗುವ ಪ್ರಾಣಿಗಳು ಮನುಷ್ಯರ ಮೇಲೆ ಮಾರಣಾಂತಿಕ ಗಾಯಗಳನ್ನು ಮಾಡುತ್ತವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ರಾತ್ರಿ ವೇಳೆಯ ಶಬ್ದ ಮಾಲಿನ್ಯದಿಂದಾಗಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮ್ಮ ಸಮಸ್ಯಗಳಿಗೆ ಧ್ವನಿ ಎತ್ತಿದ ಗ್ರಾಮಸ್ಥರಿಗೆ ಕೆಲವು ಹೋಂಸ್ಟೇ ಮಾಲೀಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ರಿಟ್ ಅರ್ಜಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಾದ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಹಾಗೂ ಸ್ಥಳೀಯ ಆಡಳಿತ ಕೇಂದ್ರಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಹೈಕೋರ್ಟ್‌ನ ಈ ನಿರ್ದೇಶನದಿಂದಾಗಿ ಗ್ರಾಮಸ್ಥರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ಹಾಗೂ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಲಿರುವ ಕ್ರಮದ ಮೇಲೆ ಗ್ರಾಮದ ಭವಿಷ್ಯ ಮತ್ತು ಅಲ್ಲಿನ ಪರಿಸರದ ನೆಮ್ಮದಿ ಅವಲಂಬಿತವಾಗಿದೆ.





