ಜೋಯಿಡಾ: ಮುಂಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಡಿಸೆಂಬರ್. 6ರಂದು ಜಿಲ್ಲಾಮಟ್ಟದ ‘ಬೃಹತ್ ಕಾರವಾರ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅರಣ್ಯವಾಸಿಗಳು ಮನೆಗೊಬ್ಬರಂತೆ ಭಾಗವಹಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಇಂದು ಜೋಯಿಡಾ ತಾಲೂಕಿನ ಕುಣಬಿ ಭವನದಲ್ಲಿ ನಡೆದ ಅರಣ್ಯವಾಸಿಗಳ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುವ ಚಳಿಗಾಲ ಅಧಿವೇಶನವು ಅರಣ್ಯವಾಸಿಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಅತ್ಯುತ್ತಮ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಸಮಾವೇಶದ ಮಾಹಿತಿಯನ್ನು ಗ್ರಾಮ–ಗ್ರಾಮಕ್ಕೆ ತಲುಪಿಸಿ, ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಜವಾಬ್ದಾರಿ ಗ್ರೀನ್ ಕಾರ್ಡ್ ಪ್ರಮುಖರ ಮೇಲಿದೆ ಎಂದು ಸೂಚಿಸಿದರು.

ಕಾನೂನು ಜ್ಞಾನ ಮತ್ತು ಅರಿವು ಕೊರತೆಯಿಂದ ಅರಣ್ಯವಾಸಿಗಳು ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ಅರಣ್ಯವಾಸಿಗಳಲ್ಲಿ ಕಾನೂನು ತಿಳುವಳಿಕೆ, ಜಾಗೃತಿ ಮತ್ತು ಹಕ್ಕುಗಳ ಅರಿವು ಮೂಡಿಸಲು ‘ಕಾನೂನು ಜಾಗೃತ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗುತ್ತಿದೆ. ಭೂಮಿ ಹಕ್ಕಿಗಾಗಿ ಸಂಘಟಿತ ಹೋರಾಟದ ಜೊತೆಗೆ ಕಾನೂನು ಹೋರಾಟಕ್ಕೂ ವೇದಿಕೆ ಸಿದ್ಧವಿದೆ ಎಂದು ಅವರು ಹೇಳಿದರು. ಜಿಲ್ಲಾದ್ಯಂತ ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಕಾನೂನು ಜಾಗೃತ ಜಾಥಾ ಆಯೋಜಿಸುವ ಮೂಲಕ ಅವರ ಹಕ್ಕುಗಳ ಪರವಾಗಿ ನಿರಂತರ ಹೋರಾಟ ನಡೆಯಲಿದೆ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ಭೂಮಿ ಹಕ್ಕು ಅನಿವಾರ್ಯ: ಸುಭಾಷ್ ಗಾವಡ ಭೂ ರಹಿತರಾದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾದರೆ, ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಗಂಭೀರ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡುವ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ, ಅವರ ಪರವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಸಂಚಾಲಕ ಹಾಗೂ ಸಾಮಾಜಿಕ ಹೋರಾಟಗಾರ ಸುಭಾಷ್ ಗಾವಡ ಒತ್ತಾಯಿಸಿದರು.
ಎಂ. ರಫೀಕ್ ಖಾನ್, ದೀಲಿಪ್ ಮಿರಾಶಿ, ಬಬಲಿ ಗಾಂವಕರ್, ರತ್ನಾಕರ್ ನಾಯ್ಕ, ಛಾಯಾ ಉಳವಿ, ಕೇಶವ ವರಕಟಕರ್, ರಮೇಶ್ ಜಿ. ಗಾವಂಟಕರ್, ರಾಮದಾಸ್ ವೇಳಿಪ್, ಅಂತೋನ್, ರಾಮದಾಸ್, ಉಳವಿ ಹಾಗೂ ಇತರರು ಉಪಸ್ಥಿತರಿದ್ದರು.





