ಜೋಯಿಡಾ (ರಾಮನಗರ): ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಮ್ಯಾಗೇರಿ ಎಂಬುವವರೇ ಬಂಧಿತ ಅಧಿಕಾರಿ.
ಘಟನೆಯ ವಿವರ: ಸ್ಥಳೀಯ ನಿವಾಸಿ ಗುರ್ಜರ್ ಎಂಬುವವರು ತಮ್ಮ ಜಮೀನಿನ ದಾಖಲೆಗಳಲ್ಲಿ ಬದಲಾವಣೆ ಮಾಡಿಕೊಡುವಂತೆ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಅವರನ್ನು ಕೋರಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಅಧಿಕಾರಿ 18 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಅಧಿಕಾರಿಯ ಭ್ರಷ್ಟತನದಿಂದ ಬೇಸತ್ತ ಸಂತ್ರಸ್ತರು ಕೂಡಲೇ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪ್ಲಾನ್ ರೂಪಿಸಿದ ಲೋಕಾಯುಕ್ತ ಪೊಲೀಸರು, ಶುಕ್ರವಾರದಂದು ಕಾರ್ಯಾಚರಣೆ ನಡೆಸಿದರು. ದೂರುದಾರರಿಂದ 13 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಯನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಎಸ್.ಎಸ್.ಎಲ್.ಸಿ ಪರೀಕ್ಷೆ: ಶೇ. 100ರಷ್ಟು ಹಾಜರಾತಿ ಮತ್ತು ಫಲಿತಾಂಶಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ
ಲೋಕಾಯುಕ್ತ ಸಿಪಿಐ ವಿನಾಯಕ್ ಬಿಲ್ಲವ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದ್ದು, ತಂಡದ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಂಧಿತ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತನಿಖೆ ಮುಂದುವರಿದಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಸಗುವವರಿಗೆ ಈ ಘಟನೆ ಒಂದು ಎಚ್ಚರಿಕೆಯ ಸಂದೇಶ ನೀಡಿದಂತಾಗಿದ್ದು, ಜಿಲ್ಲೆಯಾದ್ಯಂತ ಈ ಕುರಿತು ವ್ಯಾಪಕ ಚರ್ಚೆ ವ್ಯಕ್ತವಾಗುತ್ತಿದೆ.





