ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಂತೆ ಮೈದಾನದ ಬಳಿ ಹಳೇ ಕಟ್ಟಡದ ಕೊಠಡಿಯಲ್ಲಿ ಪ್ಲಾಸ್ಟಿಕ್, ಪೇಪರ್ ಗುಜರಿ ಸಾಮಗ್ರಿಗಳನ್ನು ಆಯುತ್ತಾ ಬದುಕನ್ನು ಕಟ್ಟಿಕೊಂಡಿದ್ದ ಕುಟುಂಬವನ್ನು ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಿದ ನಂತರ ಆ ಕುಟುಂಬ ಈಗ ಬೀದಿ ಪಾಲಾಗಿತ್ತು. ಈ ಬಗ್ಗೆ ಈದಿನ ಡಾಟ್ ಕಾಮ್ ಸಂಪೂರ್ಣ ವಿವರಗಳನ್ನೊಳಗೊಂಡ ವರದಿಯನ್ನು ಕಳೆದ ಡಿ.16ರಂದು ಬಿತ್ತರಿಸಿತ್ತು. ಸದ್ಯ ಈದಿನ ಡಾಟ್ ಕಾಮ್‌ನ ವರದಿಗೆ ಸಿಎಂ ಕಚೇರಿ ಸ್ಪಂದಿಸಿದ್ದು, ಅಶಕ್ತ ಮಹಿಳೆಯ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸಂತೆ ಮೈದಾನದ ಬಳಿ ಹಳೇ ಕಟ್ಟಡದ ಕೊಠಡಿಯಲ್ಲಿ ಶ್ರೀಮತಿ ಲಕ್ಷ್ಮೀ ಹಾಗೂ ಅವರ ಕುಟುಂಬವು ಕಳೆದ 25 ವರ್ಷಗಳಿಂದ ವಾಸವಾಗಿತ್ತು. ಆ ಕುಟುಂಬದಲ್ಲಿ ಅನಾರೋಗ್ಯ ಪೀಡಿತರಾದ ವೃದ್ದೆ, ಓರ್ವ ಮಹಿಳೆ ಹಾಗೂ ಐದು ವರ್ಷದ ಪುಟ್ಟ ಮಗು ವಾಸ ಮಾಡುತ್ತಿತ್ತು. ಈ ಕುಟುಂಬಕ್ಕೆ ಆಧಾರ್ ಕಾರ್ಡ್ ಸಹಿತ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ. ಇದರಿಂದಾಗಿ ಅವರಿಗೆ ಸರ್ಕಾರದಿಂದ ಯಾವುದೇ ಸವಲತ್ತುಗಳು ಕೂಡ ಸಿಗುತ್ತಿರಲಿಲ್ಲ. ಈ ನಡುವೆ ಸ್ಥಳೀಯರು ಖಾಸಗಿ ಸ್ಥಳದಲ್ಲಿ ಪುಟ್ಟ ಗುಡಿಸಲನ್ನು ಕಟ್ಟಿಸಿಕೊಟ್ಟಿದ್ದರು. ಈ ಬಗ್ಗೆ ಮಾಹಿತಿ ಅರಿತ ಈದಿನ ಡಾಟ್ ಕಾಮ್ ವೀಡಿಯೋ ಸಹಿತ ವರದಿ ಮಾಡಿತ್ತು. ಅಲ್ಲದೇ, ಈ ಬಗ್ಗೆ ಸಿಎಂ ಕಚೇರಿಗೂ ಟ್ಯಾಗ್ ಮಾಡಿ ಮಾಹಿತಿ ನೀಡಿತ್ತು.
ಈ ವರದಿಗೆ ಸ್ಪಂದಿಸಿರುವ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ವೈಷ್ಣವಿ ಹಾಗೂ ಅವರ ಕಚೇರಿಯು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹಾಗೂ ಅವರ ಕುಟುಂಬದ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಕಡೂರು ಪುರಸಭೆಯ ಅಧಿಕಾರಿಗಳು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಅವರಿಗೆ ವಾಸಸ್ಥಳ ದೃಢೀಕರಣ ಪತ್ರ ಹಾಗೂ ಚಿಂದಿ ಹಾಯುವ ದೃಢೀಕರಣ ಪತ್ರವನ್ನೂ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಸಿಗುವಂತೆ ಮಾಡುವ ಭರವಸೆಯನ್ನೂ ನೀಡಿದ್ದಾರೆ.
ಆದಷ್ಟು ಶೀಘ್ರವಾಗಿ ಲಕ್ಷ್ಮೀ ಹಾಗೂ ಅವರ ಕುಟುಂಬಕ್ಕೆ ಸರ್ಕಾರದಿಂದ ವಸತಿ ಸಹಿತ ಎಲ್ಲ ಸೌಲಭ್ಯಗಳು ಸಿಗಲೆಂದು ನಮ್ಮ ಹಾರೈಕೆ. ವರದಿ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಈದಿನ ಡಾಟ್ ಕಾಮ್‌ಗೆ ಲಕ್ಷ್ಮೀ ಹಾಗೂ ಅವರ ಕುಟುಂಬ, ಸ್ಥಳೀಯರು ಧನ್ಯವಾದ ಸಲ್ಲಿಸಿದ್ದಾರೆ.



ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.




