ತುರ್ತಾಗಿ ಬರಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ-ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಕಲಬುರಗಿ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮಾಡುವುದರ ಮೂಲಕ ಜಿಲ್ಲಾಧಿಕಾರಿ ಮುಖಾಂತರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಉಪಾಧ್ಯಕ್ಷ ಗಣಪತ್ ರಾವ್ ಕೆ ಮಾನೆ ಮಾತನಾಡಿ, “ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು” ಎಂದು ಆಗ್ರಹಿಸಿದರು.
ರಾಜ್ಯದ 223 ತಾಲೂಕುಗಳಲ್ಲಿ ಬರವಿದ್ದು ಜನ-ಜಾನುವಾರುಗಳಿಗೆ ನೀರು, ಮೇವಿಗಾಗಿ ಹಾಹಾಕಾರ ಆರಂಭವಾಗಿದೆ. ಪತ್ರಿಕೆಗಳ ವರದಿಯ ಪ್ರಕಾರ 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಳೆದ ವರ್ಷವೂ ಕೂಡ ಸರಿಯಾದ ಬೆಳೆಯಾಗದೆ ರೈತರಿಗೆ ಮೇವು ಸಂಗ್ರಹಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಮೇವಿನ ಲಭ್ಯತೆಯ ಕೊರತೆಯ ಜತೆಗೆ ವಿಪರೀತ ಬೆಲೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಮೇವಿನ ಅಭಾವಕ್ಕೆ ಹೋಲಿಸಿಕೊಂಡರೆ ಮೇವು ಬ್ಯಾಂಕುಗಳು ಅಗತ್ಯವಿರುವಷ್ಟಿಲ್ಲ. ಜೊತೆಗೆ ರೈತರಿಗೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಜಾನುವಾರುಗಳಿಗೆ ಪಶು ಆಹಾರ ನೀಡುವುದಕ್ಕೂ ಹಣಕಾಸಿನ ತೊಂದರೆಯಿದೆ. ಬರವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೆಲಸಗಳು ನಡೆಯುತ್ತಿಲ್ಲ. ಆದ್ದರಿಂದ ಕೃಷಿ ಕಾರ್ಮಿಕರು ಮತ್ತು ಕೃಷಿ ಚಟುವಟಿಕೆಗಳನ್ನು ನೆಚ್ಚಿಕೊಂಡಿರುವವರಿಗೆ ಉದ್ಯೋಗವಿಲ್ಲದೆ ಊರೂರು ಅಲೆಯುವ, ಗುಳೆ ಹೋಗುವ ಪ್ರಮೇಯ ಬಂದಿದೆ. ಮನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವುದರಲ್ಲಿ ಮತ್ತು ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ” ಎಂದರು.
“ಒಂದು ಕಡೆ, ನೀರು, ಮೇವಿನ ಸಮಸ್ಯೆಯಾದರೆ, ಇನ್ನೊಂದು ಕಡೆ ಕೊಳವೆ ಬಾವಿಗಳು ಬತ್ತಿಹೋಗಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ. ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳು ದುರಿತ ಸಮಯದ ಲಾಭ ಪಡೆದುಕೊಳ್ಳಲು ಕೊಳವೆ ಬಾವಿ ಕೊರೆಯುವ ದರಗಳನ್ನು ಏರಿಸಿ ಉರಿಯುವ ಗಾಯಕ್ಕೆ ಉಪ್ಪು ಸವರಿದ್ದಾರೆ” ಎಂದು ಹೇಳಿದರು.
“ಒಂದು ಕೊಳವೆ ಬಾವಿಗೆ ಹಲವು ಲಕ್ಷ ಖರ್ಚು ಮಾಡಬೇಕು ಮತ್ತು ನೀರು ಬರುತ್ತದೆಯೆಂಬ ಖಚಿತತೆಯೂ ಇಲ್ಲ. ಎಷ್ಟೋ ಕಡೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್‌ಗಳಿಂದ ತೋಟಕ್ಕೆ ನೀರು ಹಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ರೈತರು ಬೆಳೆಹಾನಿ, ಆದಾಯ ಕಡಿತ, ನಿರುದ್ಯೋಗ, ಒಟ್ಟಾರೆ ಬರಗಾಲದಲ್ಲಿರುವಾಗ ಮೈಕ್ರೊ ಫೈನಾನ್ಸ್‌ನವರು ಸಾಲ ವಸೂಲಾತಿಗೆ ನಿಂತಿರುವುದು ಅತ್ಯಂತ ಖಂಡನೀಯ” ಎಂದರು.
“ಆರ್ಥಿಕ ಸಂಕಷ್ಟದ ಸಮಯದಲ್ಲಿ ಮನೆ ನಡೆಸಿಕೊಂಡು ಹೋಗಲು ಮತ್ತು ಕೃಷಿ ಕೆಲಸಗಳಿಗಾಗಿ ಗ್ರಾಮೀಣ ಜನರು ಮುಖ್ಯವಾಗಿ ರೈತ ಮಹಿಳೆಯರು ವಿಶೇಷವಾಗಿ ಮೈಕ್ರೊ ಫೈನಾನ್ಸ್‌ನವರಿಂದ ಸಾಲ ತೆಗೆದುಕೊಳ್ಳುತ್ತಾರೆ. ಮೈಕ್ರೊ ಫೈನಾನ್ಸ್‌ನವರು ವಿಪರೀತ ಬಡ್ಡಿಯ ಜತೆ ಅಪಮಾನಕಾರಿ ರೀತಿಯಲ್ಲಿ ಸಾಲ ವಸೂಲಾತಿಗೆ ಇಳಿದಿರುವುದರಿಂದ ಅಪಮಾನ ತಾಳಲಾಗದ ರೈತರು, ಮುಖ್ಯವಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರಪರಿಹಾರ ಹಣದ ಬಿಡುಗಡೆ ವಿಷಯದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಂಡು ಚುನಾವಣಾ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇವರ ಮಧ್ಯೆ ರೈತರು ಸತ್ತು ಸುಣ್ಣವಾಗುತ್ತಿದ್ದಾರೆ. ಇದಂತೂ ಅಕ್ಷಮ್ಯ ಮತ್ತು ಅಮಾನವೀಯ. ಆದ್ದರಿಂದ ಬರದಿಂದ ಮುಖ್ಯವಾಗಿ ರೈತ ಸಮುದಾಯವನ್ನು ಕಾಪಾಡಲು ಕೆಳಗಿನ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕು” ಎಂದು ಎಐಕೆಕೆಎಂಎಸ್ ಆಗ್ರಹಿಸುತ್ತದೆ.
ಎಐಕೆಕೆಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ ಭಗವಾನ್ ರೆಡ್ಡಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಜಿಲ್ಲಾಧ್ಯಕ್ಷ ಗಣಪತ್ ರಾವ್ ಕೆ ಮಾನೆ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್ ಸಿಂಗ್ ಸದಸ್ಯರುಗಳಾದ ಹರೀಶ್ ಸಂಗಾಣಿ, ಭೀಮಶಂಕರ ಆಂದೋಲ, ಗುಂಡೇರಾಯ್ ಪಾಟೀಲ್, ಶರಣಬಸಪ್ಪ ಬಾಬನಗೋಳ್, ಅಮೃತ್ ಚೌಹಾನ್,ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ
ಜಿಲ್ಲಾ ಕಾರ್ಯದರ್ಶಿ ಇದ್ದರು.





