ಕೆಲಸದ ಸ್ಥಳದಲ್ಲಿ ಹೊರಗುತ್ತಿಗೆ ನೌಕರರನ್ನು ಶೋಷಿಸಲಾಗುತ್ತಿದೆ ಎಂದು ಆರೋಪಿಸಿ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ಕಲಬುರಗಿ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, “ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಸತಿ ನಿಲಯಗಳಲ್ಲಿ ದಿನನಿತ್ಯ 12-14 ತಾಸು ದುಡಿದ ನೌಕರರ ವೇತನ ಯಾವಾಗ ಕೈಗೆ ಬರುತ್ತದೆಯೋ ಆ ದೇವರೇ ಬಲ್ಲ. ಈ ಹಿಂದೆ ರಂಜಾನ್ ಹಬ್ಬದ ಸಮಯದಲ್ಲಿ 5-6 ತಿಂಗಳ ಬಾಕಿ ವೇತನಕ್ಕಾಗಿ ಸ್ವಿಸ್(ಶಾರ್ಪ್) ಮ್ಯಾನ್ ಪವರ್ ಏಜೆನ್ಸಿಗೆ ಕೈ ಕಾಲು ಬಿದ್ದು ಗೋಳಾಡಿದರೂ ವೇತನ ಪೂರ್ತಿಯಾಗಿ ಪಾವತಿಸದೇ ಹಬ್ಬದಲ್ಲಿ ಉಪವಾಸ ವನವಾಸ ಕಾಲ ಕಳೆಯುವಂತಾಯಿತು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸರ್ಕಾರದಿಂದ ವೇತನ ಮಂಜೂರಾದರೂ ವೇತನ ಪಾವತಿ ವಿಷಯದಲ್ಲಿ ಏಜೆನ್ಸಿಗಳು ನೌಕರರನ್ನು ಕಡೆಗಣಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಾರ್ಪ್ ಏಜೆನ್ಸಿಯ 2024-25 ಸಾಲಿನಲ್ಲಿ ಯಾವ ನೌಕರರಿಗೂ ತಾತ್ಕಾಲಿಕ ನೇಮಕಾತಿ ಆದೇಶ ಕೊಟ್ಟಿಲ್ಲ. ಪ್ರತಿ ತಿಂಗಳು ಇ.ಪಿ.ಎಫ್ ಹಣ ಜಮಾ ಮಾಡದೇ ಮೋಸ ಮಾಡಲಾಗಿದೆ. ಇಷ್ಟೆಲ್ಲಾ ಶೋಷಣೆ ನಡೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಮೌನವಹಿಸಲು ಕಾರಣವೇನು? ಕೂಡಲೇ ಬಾಕಿ ವೇತನ ಪಾವತಿಸಲು ತಾತ್ಕಾಲಿಕ ಆದೇಶ ಕೊಡಿಸಲು ಅಲ್ಲದೆ ಇ.ಪಿ.ಎಫ್ ನೌಕರರ ಹೆಸರಿಗೆ ಜಮಾ ಮಾಡಿಸಲು ಶಿಸ್ತಿನ ಕ್ರಮ ಜರುಗಿಸಿ ನೌಕರರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು” ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕಲಬುರಗಿ | ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ಚಿಂಚೋಳಿ ತಾಲೂಕ ಅಧ್ಯಕ್ಷೆ ನರಸಮ್ಮ ಚಂದನಕೇರಾ, ಉಪಾಧ್ಯಕ್ಷ ಮೇಘರಾಜ ಕಠಾರೆ, ಅಧ್ಯಕ್ಷ ಆಳಂದ ತಾಲೂಕ ನಾಗರತ್ನಾ ಮದನಕರ್, ಜಿಲ್ಲಾ ಅಧ್ಯಕ್ಷ ಪರಶುರಾಮ ಹಡಗಲಿ, ನಗರ ಅಧ್ಯಕ್ಷ ರಾಮಚಂದ್ರ ಪವಾರ, ಚಿತ್ತಾಪೂರ ತಾಲೂಕ ಅಧ್ಯಕ್ಷ ರವಿ ಯರಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.





