ಈ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಹಾಗೂ ಅತಿವೃಷ್ಟಿ ಹಿನ್ನೆಲೆ ಕಲಬುರಗಿ ಜಿಲ್ಲೆಯನ್ನು ಹಸಿಬರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಬಂದ್‌ಗೆ ಕರೆ ಕೊಟ್ಟಿವೆ.
ರೈತ, ದಲಿತ, ಕನ್ನಡ, ಮಹಿಳಾ, ಕಾರ್ಮಿಕ ಸಂಘಟನೆಗಳು ಸೇರಿದಂತೆ 15ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಸೋಮವಾರ ಬೆಳ್ಳಂ ಬೆಳಿಗ್ಗೆ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ಬಸ್ ಸಂಚಾರ ಬಂದ್ ಮಾಡಿಸಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಜಗತ್ ವೃತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಹಸಿಬರ ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ.
ಬೇಡಿಕೆಗಳೇನು:
ಹಸಿ ಬರಗಾಲ ಘೋಷಣೆ, ತಕ್ಷಣವೇ ರಾಷ್ಟ್ರೀಯ ವಿಪತ್ತು ಘೋಷಿಸಿ, ಪ್ರತಿ ಎಕರೆಗೆ 25 ಸಾವಿರ ತುರ್ತು ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ, ನದಿ ತೀರದ ಗ್ರಾಮಗಳ ಮನೆಗಳು ಮುಳುಗಡೆಯಾದ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು. ಹಿಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಉಚಿತ ನೀಡಬೇಕು.





