ಆಳಂದದ ಶಕಾಪುರ ಸೇತುವೆ ಬಳಿಯ ಅಮರ್ಜಾ ನದಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ರಾತ್ರಿ ಕಲೆಹಾಕಿದ್ದಾರೆ.
ಆಳಂದ ಕ್ಷೇತ್ರದ ಮತಪಟ್ಟಿ ಕುರಿತು ಕೆಲವು ಮತದಾರರ ಹೆಸರನ್ನು ಅಕ್ರಮವಾಗಿ ತೆಗೆದುಹಾಕಲು ಯತ್ನಿಸಿದ ಪ್ರಕರಣ ಸಂಬಂಧ, ಸುಭಾಷ್ ಗುತ್ತೆದಾರ್ ಅವರ ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನೆಯ ಮೇಲೆ ಎಸ್‌ಐಟಿ ತಂಡ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಆಳಂದದ ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ಅವರ ಮನೆ ಎದುರು ಅಪಾರ ಪ್ರಮಾಣದ ದಾಖಲೆಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಖಚಿತ ಮಾಹಿತಿಯ ಮೇರೆಗೆ, ಸಿಐಡಿ ಎಸ್ಪಿ ಶುಭನ್ವಿತಾ ಮತ್ತು ಡಿವೈಎಸ್ಪಿ ಅಸ್ಲಂಪಾಶಾ ಆಳಂದಕ್ಕೆ ಭೇಟಿ ನೀಡಿ ಮನೆ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಅರೆಬರೆಯಾಗಿ ಸುಟ್ಟ ದಾಖಲೆಗಳನ್ನು ನಂತರ ಗೂಡ್ಸ್ ವಾಹನದಲ್ಲಿ ಶಕಾಪುರ ಸೇತುವೆ ಬಳಿಯ ಅಮರ್ಜಾ ನದಿಗೆ ಸುರಿಸಲಾಗಿದೆ. ಸ್ಥಳಕ್ಕೆ ಸಿಐಡಿ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದಲ್ಲಿ ಸಿಬ್ಬಂದಿ ತಂಡ ನದಿಯಲ್ಲಿ ಇಳಿದು ತಡರಾತ್ರಿ ತನಕ ಸುಟ್ಟ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಉಸ್ತುವಾರಿ ಸಚಿವರ ಭರವಸೆ : 7 ದಿನಗಳ ಧರಣಿ ಕೈಬಿಟ್ಟ ರೈತರು
ಸ್ಥಳೀಯ ಅಧಿಕಾರಿಗಳಾಗಿ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ್ ಯಾತನೂರು ಸೇರಿದಂತೆ ಹಲವರು ಕಾರ್ಯ ನಿರ್ವಹಿಸಿದ್ದಾರೆ. ಈ ಪ್ರಕರಣವು ಮತಪಟ್ಟಿ ಸಂಬಂಧ ಅಕ್ರಮ ಪ್ರಯತ್ನಗಳ ಭಾಗವಾಗಿದ್ದು, ಸಿಐಡಿ ತಂಡ ಮುಂದಿನ ತನಿಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸುತ್ತಿರುವುದು ತಿಳಿದು ಬಂದಿದೆ.





