ಜಿಲ್ಲಾ ಪೋಲಿಸ್ ಕವಾಯತ್ ಮೈದಾನದಲ್ಲಿ ನವೆಂಬರ್ 28ರಿಂದ 30ರ ವರೆಗೆ ನಡೆದ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸೇಡಂ ಸರ್ಕಲ್ ಪೋಲಿಸ್ ಕಛೇರಿ ‘ಉತ್ತಮ ಸರ್ಕಲ್’ ಪ್ರಶಸ್ತಿಗೆ ಭಾಜನರಾಗಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಹೆಚ್ಚುವರಿ ಎಸ್‌ಪಿ ಮಹೇಶ್ ಮೇಘಣ್ಣನವರ್ ಅವರು ಸರ್ಕಲ್ ಇನ್ಸ್‌ಪೆಕ್ಟರ್ ಮಹಾದೇವ ದಿಡಿಮನಿ ಅವರಿಗೆ ಉತ್ತಮ ಸರ್ಕಲ್ ಪ್ರಶಸ್ತಿ ನೀಡಿ ಗೌರವಿಸಿದರು.
2024–25ನೇ ಸಾಲಿನಲ್ಲಿ 100 ಕ್ಕೂ ಹೆಚ್ಚು ಕಳವಾಗಿದ್ದ ಬೈಕುಗಳನ್ನು ಪತ್ತೆಹಚ್ಚುವಲ್ಲಿ ಸೇಡಂ ಸರ್ಕಲ್ ವಿಶೇಷ ಯಶಸ್ಸು ಸಾಧಿಸಿದ್ದು, 160 ಗ್ರಾಂ ಬಂಗಾರ, 400 ಗ್ರಾಂ ಬೆಳ್ಳಿ ಹಾಗೂ ₹2 ಲಕ್ಷ ನಗದು ವಶಪಡಿಸಿಕೊಂಡು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇಡಂ ತಾಲೂಕಿನ ಮಳಖೇಡ ಹಾಗೂ ಕುರಕುಂಟ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಹಲವಾರು ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿದ ಜೊತೆಗೆ ಮನೆ ಮನೆಗೆ ಪೋಲಿಸ್ ಯೋಜನೆ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು, ಶಾಂತಿ–ಸುರಕ್ಷತೆಗೆ ಸಂಬಂಧಿಸಿದ ಕ್ಯಾಂಪ್‌ಗಳು ಮುಂತಾದ ಕಾರ್ಯಾಚರಣೆಗಳಿಗೆ ದಿಡಿಮಣಿ ನೇತೃತ್ವದ ತಂಡ ಶ್ಲಾಘನೆಗೆ ಪಾತ್ರವಾಗಿದೆ.
ಸೇಡಂ ಪ್ರದೇಶದಲ್ಲಿ ಸಿಮೆಂಟ್ ಕಾರ್ಖಾನೆಗಳ ಸಂಖ್ಯೆ ಹೆಚ್ಚಿರುವುದರಿಂದ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಕೈಗೊಂಡ ಕ್ರಮಗಳು ವಿಶೇಷವಾಗಿ ಗಮನಸೆಳೆದಿವೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಶಿಬಿರ ಆಯೋಜಿಸಿದಕ್ಕಾಗಿ ದಿಡಿಮನಿ ಅವರ ತಂಡಕ್ಕೆ ವಿಶೇಷ ಪ್ರಶಂಸೆ ದೊರಕಿದೆ. ಸೇಡಂ ಪೊಲೀಸ್ ಠಾಣೆ ಆವರಣದಲ್ಲಿ ನಡೆಸಿದ ಸ್ವಚ್ಛತಾ ಅಭಿಯಾನ ಹಾಗೂ ಸಸಿ ನೆಡುವ ಕಾರ್ಯದಿಂದ ‘ಪರಿಸರಪ್ರೇಮಿ ಅಧಿಕಾರಿ’ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮತ ಕಳವು | ಚು. ಆಯೋಗದ ಪರ ಪತ್ರ ಬರೆದವರು ಆಳಂದಕ್ಕೆ ಬರಲಿ: ಶಾಸಕ ಬಿ.ಆರ್ ಪಾಟೀಲ್
ಮಹಾದೇವ ದಿಡಿಮನಿ ಅವರು ಸಿಪಿಅಐ, ಐಪಿ ವಿಭಾಗದ ಅಧಿಕಾರಿಗಳಿಗೆ ಆಯೋಜಿಸಿದ 100 ಮೀ. ಓಟದಲ್ಲಿ ಪ್ರಥಮ ಸ್ಥಾನ,
ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ, 9 ಎಂ ಎಂ ಪಿಸ್ತೂಲ್ ಶೂಟಿಂಗ್‌ನಲ್ಲಿ ದ್ವಿತೀಯ ಸ್ಥಾನ, ಜಾವೇಲಿಯನ್ ಥ್ರೋನಲ್ಲಿ ತೃತೀಯ ಸ್ಥಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೋರಿದ ಶ್ರೇಷ್ಠ ಸಾಧನೆ ಹಿನ್ನೆಲೆಯಲ್ಲಿ ಮಹಾದೇವ ದಿಡಿಮಣಿ ಅವರಿಗೆ ಜಿಲ್ಲಾ ಮಟ್ಟದ ‘ಉತ್ತಮ ಸರ್ಕಲ್’ ಪ್ರಶಸ್ತಿ ಲಭಿಸಿದೆ.
ವರದಿ: ಸುನೀಲ್ ರಾಣಿವಾಲ್





