ದೇಶದಲ್ಲಿ ನಡೆಯುತ್ತಿರುವ ನ್ಯಾಯಾಂಗದ ಮೇಲಿನ ದಾಳಿ, ಶೋಷಿತ ಸಮುದಾಯದ ಮೇಲಿನ ಅತ್ಯಾಚಾರ, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಜಾತಿ ತಾರತಮ್ಯ, ಸಚಿವ ಪ್ರಿಯಾಂಕ ಖರ್ಗೆ ತೇಜೋವಧೆ ಮತ್ತು ಸಾರ್ವಜನಿಕವಾಗಿ ನಿಂದನೆ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್ ಭಂಡಾರಿ ಆಗ್ರಹಿಸಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ. ಬಿ ಆರ್ ಗವಾಯಿಯವರ ಮೇಲೆ ಮನುವಾದಿ ಮನಸ್ಥಿತಿ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯವಾಗಿದೆ. ಇದು ಕೇವಲ ವಯಕ್ತಿಕ ದಾಳಿಯಾಗಿರದೆ ನ್ಯಾಯಾಂಗ ವ್ಯವಸ್ಥೆಯ ಘನತೆ, ಸಾರ್ವಭೌಮತೆ ಮತ್ತು ಅಂಬೇಡ್ಕರ್ ಸಿದ್ದಾಂತದ ಮೇಲೆ ನಡೆದ ನೇರ ದಾಳಿಯಾಗಿದೆ. ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಿತ್ತೂರು ರಾಣಿ ಚನ್ನಮ್ಮನ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕ: ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
“ಸಚಿವ ಪ್ರಿಯಾಂಕ್ ಖರ್ಗೆಯವರು ಸರ್ಕಾರಿ ಸಂಸ್ಥೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದ ನಂತರ ಆರೆಸ್ಸೆಸ್ ಮತ್ತು ಕಾರ್ಯಕರ್ತರಿಂದ ವ್ಯವಸ್ಥಿವಾದ ಟಾರ್ಗೆಟ್ ಹಾಗೂ ತೇಜೋವಧೆ ಪ್ರಯತ್ನಗಳಿಗೆ ಒಳಗಾಗಿತ್ತಿರುವುದು ವಿಷಾಧನೀಯ. ಸಾರ್ವಜನಿಕ ಜೀವದಲ್ಲಿರುವ ಜನಪ್ರತಿನಿಧಿಗಳು ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದುದಕ್ಕಾಗಿ ಬೆದರಿಕೆಗೆ ಗುರಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಈ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಚಿವರ ಸುರಕ್ಷತೆಗೆ ಖಾತ್ರಿ ಪಡಿಸಬೇಕು” ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದರು.





