ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು. ತಾಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಸಮರ್ಪಕವಾಗಿ ಜಾರಿಗೆ ತರಬೇಕು. ಮನರೇಗಾ ಕೂಲಿ ಕಾರ್ಮಿಕರಿಗೆ ದಿನಕ್ಕೆ 600 ರೂ. ಕೂಲಿ ಮತ್ತು ವರ್ಷಕ್ಕೆ 200 ಮಾನವ ದಿನಗಳ ಕೆಲಸ ನೀಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಒತ್ತಾಯಿಸಿದೆ.
ಕಾಳಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. “ಈ ವರ್ಷ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕೂಲಿಕಾರ್ಮಿಕರು ಕೆಲಸವಿಲ್ಲದೆ ಅಲೆಯುವಂತಾಗಿದೆ. ರೈತರು ಕೂಡ ಕೂಲಿಕಾರರಾಗಿದ್ದಾರೆ. ಪಟ್ಟಣಗಳಿಗೆ ಜನರು ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾಳಗಿ ತಾಲೂಕನ್ನು ಬರ ಪೀಡಿತ ಪ್ರವೇಶವೆಂದು ಘೋಷಿಸಿ, ಪರಿಹಾರ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
“ಬರಗಾಲದ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರಿಗೆ ನಿರಂತರ ಕೆಲಸ ನೀಡಬೇಕು, ಅದೇ ರೀತಿಯಾಗಿ ಮನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಬಿಟ್ಟು, ಕೂಲಿಕಾರರಿಗೆ ಕೆಲಸ ನೀಡುವತ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಕೋಡಿ, ಮಂಗಲಗಿ ಗ್ರಾಮದ ಕೂಲಿಕಾರರಿಗೆ ಬಾಕಿ ವೇತನ ಪಾವತಿಸಬೇಕು. ಹಲಚೇರಾ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು ಯೋಜನೆಯಡಿ ಹಾಗೂ ನೀರು ನಿರ್ವಹಣೆಗೆ ಮೀಸಲಿಟ್ಟು ಹಣವನ್ನು ಲೂಟಿ ಮಾಡಿದ ಪಿಡಿಒ ಮೈಬೂಬ್ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಗರಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಶಿನಾಥ ಬಂಡಿ, ಮಲ್ಲಮ್ಮ ಮಗಿ, ಗುರುನಂದೇಶ ಕೋಣಿನ್, ಸಲೀಂ ಪಟೇಲ ನೈಕೋಡಿ, ಶ್ರೀಶೈಲ ಜಮಾದಾರ, ರಿಯಾಜ ಪಟೇಲ್ ಮಂಗಲಗಿ, ಹನೀಫಾ ಕೋಡದೂರ, ಕಸ್ತೂರಿಬಾಯಿ ಕೋಡದೂರ, ರೇವಯ್ಯಸ್ವಾಮಿ ಕಾಳಗಿ ಇದ್ದರು.




