‘ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಘಟಕದ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಗತ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾಗಿತು. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ‘ಆರ್‌ಎಸ್‌ಎಸ್ ಬಂದ್ ಮಾಡಿ-ಬ್ಯಾನ್ ಮಾಡಿ”, ‘ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ನಾವಿದ್ದೇವೆ” ಎಂಬ ಘೋಷಣೆಗಳನ್ನು ಕೂಗಿದರು. ‘ಜಗತ್ತಿನ ಅತ್ಯಂತ ಅಪಾಯಕಾರಿ ವೈರಸ್ ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎಂಬ ಬ್ಯಾನರ್‌ನ್ನು ದಹಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ‘ಜನತೆಯ ಮಧ್ಯ ವಿಷ ಬೀಜ ಬಿತ್ತುತ್ತಿರುವ ಆರ್‌ಎಸ್‌ಎಸ್‌ನ್ನು ಸರಕಾರ ನಿಷೇಧಗೊಳಿಸದೆ ಕುಳಿತಿದೆ. ದೇಶಕ್ಕೆ ಕಂಟಕವಾಗಿರುವ ಈ ಸಂಘಟನೆಯನ್ನು ಜನರೇ ನಿಷೇಧಗೊಳಿಸಬೇಕಾಗಿದೆ’ ಎಂದರು.

ಅವರು ಮುಂದುವರೆದು, ‘ಆರ್‌ಎಸ್‌ಎಸ್ ಕೋಮುವಾದದ ವಿಷ ನಾಗರಹಾವಿನಂತೆ ರೂಪಾಂತರಗೊಂಡಿದೆ. ಇಟಲಿಯ ಪ್ಯಾಸಿಸ್ಟ್ ನಾಯಕ ಮುಸೋಲಿನಿ ಮತ್ತು ಜರ್ಮನಿಯ ಹಿಟ್ಲರ್‌ನಿಂದ ಪ್ರೇರಣೆ ಪಡೆದ ಈ ಸಂಘಟನೆ ಭಾರತದಲ್ಲಿ ಪ್ಯಾಸಿಸಂ ಮಾದರಿಯ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದೆ. ಈ ಸಂಘಟನೆಗೆ ಸಂವಿಧಾನವಿಲ್ಲ, ಹಣಕಾಸು ವ್ಯವಹಾರಗಳ ದಾಖಲೆಗಳಿಲ್ಲ, ಸಂಪೂರ್ಣ ರಹಸ್ಯಪರ ಸಂಘಟನೆಯಾಗಿದೆ’ ಎಂದು ಆರೋಪಿಸಿದರು.
ಅವರು ನೆಹರು, ಪಟೇಲ್, ಇಂಧಿರಾ ಗಾಂಧಿ ಹಾಗೂ ನರಸಿಂಹರಾವ್ ಕಾಲಘಟ್ಟಗಳಲ್ಲಿ ನಡೆದ ನಿಷೇಧ ಕ್ರಮಗಳ ಇತಿಹಾಸವನ್ನು ಉಲ್ಲೇಖಿಸಿ, ‘ಆರ್‌ಎಸ್‌ಎಸ್‌ನ ವಿರುದ್ಧ ಕಾಂಗ್ರೆಸ್ ಪಕ್ಷವು ತೋರಿದ ಮೃದು ಧೋರಣೆಗಳೇ ಇಂದು ಅದನ್ನು ಬಲಿಷ್ಠಗೊಳಿಸಿವೆ’ ಎಂದು ಹೇಳಿದರು.

ಅವರು ಮುಂದುವರೆದು, ‘ಆರ್‌ಎಸ್‌ಎಸ್ ಹಿಂದೂ ಧಾರ್ಮಿಕ ಸಂಘಟನೆಯಲ್ಲ, ಅದು ಕೋಮುವಾದ ಬಿತ್ತುವ ಸಂಘಟನೆ. ಇದರ ಪಥಸಂಚಲನಗಳು ಧಾರ್ಮಿಕ ಶೋಭಾಯಾತ್ರೆಗಳಲ್ಲ, ಅಸಹಿಷ್ಣುತೆಯ ಮೆರವಣಿಗೆಗಳಾಗಿವೆ. ಈ ಸಂಘಟನೆಯ ಉದ್ದೇಶ ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ರೂಪಿಸುವುದು ಮತ್ತು ಪೆಶ್ವಾ ಆಧಿಪತ್ಯವನ್ನು ಪುನಃ ಸ್ಥಾಪಿಸುವುದು” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಮೀಕ್ಷೆ ಕರ್ತವ್ಯದಲ್ಲಿ ಲೋಪ : ಶಿಕ್ಷಕ ಅಮಾನತು
ನಂತರ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಝಡ್ ಶ್ರೇಣಿಯ ಭದ್ರತೆ ಒದಗಿಸಬೇಕು, ಮಾಧ್ಯಮ ಮತ್ತು ಯೂಟ್ಯೂಬ್‌ನಲ್ಲಿ ನಿಂದನೆ ಅಥವಾ ಅಶ್ಲೀಲ ಭಾಷೆ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಖಾಯಂವಾಗಿ ನಿಷೇಧಗೊಳಿಸಬೇಕು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಪ್ರೊ. ಆರ್ ಕೆ ಹುಡಗಿ, ದಸಂಸ ಹಿರಿಯ ಮುಖಂಡ ಮಾನು ಗುರಿಕಾರ್, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖಾನಾ, ಸೂರ್ಯಕಾಂತ ಅಜಾದಪುರ, ಮಹೇಶ್ ಕೋಕೀಲ್, ರಾಜಕುಮಾರ ನಿಂಬಾಳ, ಪರಶುರಾಮ ರಾಜಾಪೂರ, ಸಾಯಬಣ್ಣ ಕೋಟನೂರ, ಕುಮಾರ್ ಕೋಳಿಗೇರಿ ಸೇರಿದಂತೆ ಹಲವು ಸಂಘಟನಾ ನಾಯಕರು ಭಾಗವಹಿಸಿದರು.





