ಕಚೇರಿಯ ಸಭೆಯಲ್ಲಿ ಸರ್ಕಾರಿ ನೌಕರರ ಬಳಿಯೇ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ವಿರುದ್ಧ ಕೇಳಿಬಂದಿದೆ. ಸಿಬ್ಬಂದಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿರುವ ತಹಶೀಲ್ದಾರ್ ಮಲ್ಲಣ್ಣ, ‘ನನ್ನ ಹೆಸರಿನಲ್ಲಿ ನೀವೆಲ್ಲರೂ ಹಣ ಮಾಡಿಕೊಳ್ಳುತ್ತಿದ್ದೀರಿ. ನೀವು ಪಡೆದ ಹಣದಲ್ಲಿ ನನಗೂ ಪಾಲು ಕೊಡಿ. ಇಲ್ಲವೇ, ನಿಮ್ಮ ವಿರುದ್ಧ ತನಿಖೆ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ನಿರೀಕ್ಷಕರೊಬ್ಬರು (RI) ಕಲಬುರಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. “ಸಿಬ್ಬಂದಿಗಳ ಸಭೆಯಲ್ಲಿ ನೌಕರರಿಂದ ತಹಶೀಲ್ದಾರ್ ಹಣ ಕೇಳುತ್ತಿದ್ದಾರೆ. ಸರ್ಕಾರದಿಂದ ಆಚರಿಸುವ ಜಯಂತಿಗಳು ಬರುತ್ತವೆ. ಅದಕ್ಕೆಲ್ಲ ನಾನು ಎಲ್ಲಿಂದ ಹಣ ತರಲಿ? ನೀವು ಪ್ರತಿ ತಿಂಗಳು 5 ರಿಂದ 10 ಸಾವಿರ ರೂಪಾಯಿ ಕೊಡಬೇಕು. ಎಲ್ಲ ಇಲಾಖೆಯವರು ಹಣ ಹಾಕಬೇಕೆಂದು ಒತ್ತಡ ಹೇರುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ತಹಶೀಲ್ದಾರ್ ಅವರ ಒತ್ತಡ ಸಹಿಸಲಾಗುತ್ತಿಲ್ಲ. ನನ್ನಿಂದ ಹಣ ಕೊಡಲು ಸಾಧ್ಯವಿಲ್ಲ ಎಂದರೆ, ‘ಬೇರೆಯವರಿಂದ ಹಣ ಪಡೆದು, ಕೊಡೊಕೇ ನೀಮಗೇದು ಕಷ್ಟ’ವೆಂದು ನಿಂದಿಸುತ್ತಾರೆ. ನನಗೆ ಆರ್‌ಐ ಜವಾಬ್ದಾರಿಯೇ ಬೇಡ. ನನ್ನನ್ನು ಆಫೀಸ್ ಕೆಲಸಕ್ಕೆ ಹಾಕಿಬಿಡಿ” ಎಂದು ಆರ್‌ಐ ಅವಲತ್ತುಕೊಂಡಿದ್ದಾರೆ.
ಆದಾಗ್ಯೂ, ತಮ್ಮ ಮೇಲಿನ ಆರೋಪಗಳನ್ನು ತಹಶೀಲ್ದಾರ್ ಮಲ್ಲಣ್ಣ ನಿರಾಕರಿಸಿದ್ದಾರೆ. ನಾನು ಯಾರ ಬಳಿಯೂ ಹಣ ಹೇಳಿಲ್ಲ. ನನ್ನ ವಿರುದ್ಧದ ಆರೋಪ ಸುಳ್ಳು ಎಂದಿದ್ದಾರೆ.




