ಕಲಬುರಗಿ ಜಿಲ್ಲೆಯಲ್ಲಿ ಡೆಂಘೀ ಹಾವಳಿ ದಿನೇ ದಿನೆ ವ್ಯಾಪಕವಾಗುತ್ತಿದ್ದು, ದಿನ ಬೆಳಗಾದರೆ ವೈದ್ಯರು, ಶಾಸಕರು, ಮುಖ್ಯಮಂತ್ರಿಗಳು ಟಿವಿ ಮಾಧ್ಯಮ, ಪತ್ರಿಕೆಗಳ ಮೂಲಕ ಡೆಂಘೀ ಜ್ವರದ ಕುರಿತು ಸಲಹೆ ಸೂಚನೆ ನೀಡುತ್ತಿರುವುದನ್ನು ಕಾಣುತ್ತೇವೆ.
ಬಹುತೇಕ ಹಳ್ಳಿ, ಗ್ರಾಮ, ನಗರ ಪ್ರದೇಶಗಳಲ್ಲಿ ಸುಮಾರು ಕಡೆ ಮಳೆನೀರು ಮಡುಗಟ್ಟಿ ನಿಂತಿರುವುದು, ಕೊಳೆತು ನಾರುತ್ತಿರುವ ತೆರೆದ ಚರಂಡಿಗಳ ಮಧ್ಯ ಜನರು ಬದುಕುತ್ತಿರುವುದು ವಾಸ್ತವ ಸತ್ಯವಾಗಿದೆ. ಆದರೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ನಗರ ಅಭಿವೃದ್ಧಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದು ದುರಂತವೇ ಸರಿ.

ಜನವರಿ 2024ರಿಂದ ಜುಲೈ 23ರವರೆಗೆ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೈನಂದಿನ ಡೆಂಘೀ ಪ್ರಕರಣಗಳ ವಿವರದ ಪ್ರಕಾರ ರಾಜ್ಯದಲ್ಲಿ ಒಟ್ಟು 1,03,921ರಷ್ಟು ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 15,101 ಪ್ರಕರಣಗಳು ದೃಢಪಟ್ಟಿವೆ. 640 ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಬಿಬಿಎಂಪಿ, ಶಿವಮೊಗ್ಗ, ಧಾರವಾಡ, ಹಾವೇರಿ, ಮೈಸೂರು, ಹಾಸನ ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ ಡೆಂಘೀ ಪ್ರಕರಣದಿಂದ ಹತ್ತು ಮಂದಿ ಸಾವ್ವನ್ನಪಿರುವುದು ದೃಢವಾಗಿದೆ.

ಕಲಬುರಗಿ ಡಿಎಚ್‌ಒ ಡಾ. ರತಿಕಾಂತ ಸ್ವಾಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜನವರಿಯಿಂದ ಜುಲೈ 23ರವರೆಗಿನ ಮಾಹಿತಿ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 3,167
ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 323 ಪ್ರಕರಣಗಳು ದೃಢಪಟ್ಟಿವೆ. ಎರಡು ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾಗಿವೆ. ಆದರೆ ಜಿಲ್ಲೆಯ ಡೆಂಘೀಯಿಂದ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಭಾರೀ ಮಳೆ; ಹೊಸೂರಿನ ಆಸ್ಪತ್ರೆ ಕಾಂಪೌಂಡ್ ಕುಸಿತ
“ಡೆಂಘೀ ಜ್ವರ ವ್ಯಾಪಕವಾಗಿ ಹರಡುವ ಮೊದಲೇ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಲು ಅವಕಾಶ ಮಾಡಿಕೊಡಬೇಕು. ಜತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.




