ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಲಬುರಗಿ ನಗರದಲ್ಲಿ ಸೋಮವಾರ ಸಂಜೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ, ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ರಸ್ತೆ ತಡೆದು ಪ್ರತಿಭಟಿಸಿ. ‘ಶೂ’ ಎಸೆದ ವಕೀಲನ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಿ.ಜಿ.ಸಾಗರ ಮಾತನಾಡಿ, ‘ಸುಪ್ರೀಂಕೋರ್ಟ್‌ಲ್ಲೇ ಮುಖ್ಯ ನ್ಯಾಯಮೂರ್ತಿ ವಿರುದ್ಧ ಶೂ ಎಸೆದ ಕೃತ್ಯ ಖಂಡನೀಯ. ಇದು ಸಂವಿಧಾನ, ದೇಶ ಹಾಗೂ ನ್ಯಾಯಾಲಯಕ್ಕೆ ಮಾಡಿದ ಅವಮಾನವಾಗಿದೆ. ಈ ಕೃತ್ಯದ ಹಿಂದೆ ಯಾರೆಲ್ಲರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಿ, ಆರೋಪಿ ಸಹಿತ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಸುರೇಶ ಹಾದಿಮನಿ, ಬಿ.ಸಿ.ವಾಲಿ, ಎಸ್.ಪಿ.ಸುಳ್ಳದ, ಅಂಬಣ್ಣ ಜೀವಣಗಿ, ಎಚ್. ಶಂಕರ್, ಹನುಮಂತ ಇಟಗಿ, ಸಂತೋಷ ಮೇಲ್ಮನಿ, ಸಿದ್ದು ಬೆಳಸೂರ, ಶಿವಕುಮಾರ, ರಾಘವೇಂದ್ರ ವಾಳಿಕಾರ, ಸೇರಿದಂತೆ ಹಲವರರು ಪಾಲ್ಗೊಂಡಿದ್ದರು.





