ಪಿಯು ದ್ವಿತೀಯ ವಾರ್ಷಿಕ ಪರೀಕ್ಷೆ ವೆಬ್‌ಕಾಸ್ಟಿಂಗ್ ಬಗ್ಗೆ ಅನಗತ್ಯ ಗೊಂದಲ, ಭಯ ಪಡದೆ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ತಿಳಿಸಿದರು.
ಆಳಂದ ಪಟ್ಟಣದ ಡಾ.ರಾಮ ಮನೋಹರ್ ಲೋಹಿಯಾ ಪಿಯು ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪಿಯು ದ್ವಿತೀಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼವೆಬ್‌ಕಾಸ್ಟಿಂಗ್ ವ್ಯವಸ್ಥೆಯು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ ಪಾರದರ್ಶಕವಾಗಿ ನಡೆಸಲು ಬಂದಿದೆ. ಸತತ ಅಧ್ಯಯನ, ನಿರಂತರ ಪರಿಶ್ರಮ ಹಾಗೂ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ, ಮೊಬೈಲ್, ಟಿವಿ ಮತ್ತಿತರ ಆಕರ್ಷಣೆಗಳಿಗೆ ಸಮಯ ವ್ಯರ್ಥ ಮಾಡದಂತೆ ವಿದ್ಯಾರ್ಥಿ ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕುʼ ಎಂದು ತಿಳಿಸಿದರು.
ಸಂಬುದ್ಧ ಪದವಿ ಕಾಲೇಜು ಪ್ರಾಂಶುಪಾಲ ಸಂಜಯ ಪಾಟೀಲ ಮಾತನಾಡಿ, ʼಪಿಯು ದ್ವಿತೀಯ ಹಂತವು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಅವಕಾಶಗಳ ದೃಷ್ಟಿಯಿಂದ ಜೀವನದ ದಿಕ್ಕೂಚಿಯಾಗಲಿದೆ. ನಮ್ಮ ಸಂಸ್ಥೆಯು ವೃತ್ತಿಪರ ಶಿಕ್ಷಣ, ವೈದ್ಯಕೀಯ ಕಾಲೇಜು ಮತ್ತು ಪದವಿ ಕಾಲೇಜು ಅವಕಾಶಗಳಲ್ಲಿ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರೆಯಲಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಲಿʼ ಎಂದು ತಿಳಿಸಿದರು.
ಪ್ರಾಚಾರ್ಯ ನಾಗಣ್ಣ ಸಲಗರೆ ಮಾತನಾಡಿ, “1460 ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆಗೈದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಂಪನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆʼ ಎಂದರು.
ವಿದ್ಯಾರ್ಥಿಗಳಾದ ಚನ್ನವೀರ ಬಟ್ಟರಗಾ, ಚೇತನಕುಮಾರ, ಲಕ್ಷ್ಮಿ, ಆದಿತ್ಯ, ಲಕ್ಷ್ಮಿ ಮುಗುಳೆ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಹಾಗೂ ವಿಶೇಷ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಪದಕ ನೀಡಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ : ಸಚಿವ ಪ್ರಿಯಾಂಕ್ ಖರ್ಗೆ
ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕರಾದ ಶರಣಬಸಪ್ಪ ಇಟಗಿ, ಮಲ್ಲಿಕಾರ್ಜುನ ಪಾಟೀಲ, ಶಮಸೋದ್ದೀನ್ ಕಮಲಾಪುರೆ, ಶಿವಲಿಂಗಪ್ಪ, ಮಂಟಗಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಮೃತ್ಯುಂಜಯ ಪಾಟೀಲ, ಜೈನೋದ್ದಿನ್ ಮುಜಾವರ್, ಸತೀಶ ಮುಲಗೆ, ಸಂಜೀವಿನಿ ಪಾಟೀಲ್ ಉಪಸ್ಥಿತರಿದ್ದರು. ನಾಗರಾಜ ಘಂಟೆ ನಿರೂಪಿಸಿದರೆ, ಅಶ್ವಿನ್ ಪಾಟೀಲ ವಂದಿಸಿದರು.





