ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ, ಅತಿಥಿ ಶಿಕ್ಷಕರ ಬಾಕಿ ವೇತನ ಬಿಡುಗಡೆ ಹಾಗೂ ಸರ್ಕಾರಿ ಶಾಲೆಗಳ ಉಳಿವು ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಶುಕ್ರವಾರ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಅವರುಗಳ ಮುಖಾಂತರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ. ಒಂದೇ ಶಿಕ್ಷಕರು ಎರಡು, ಮೂರು ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ರೈತ, ಕಾರ್ಮಿಕ ವರ್ಗದ ಮಕ್ಕಳ ಹಕ್ಕಿನ ಶಿಕ್ಷಣವೇ ಅಪಾಯಕ್ಕೆ ಸಿಲುಕಿದೆ’ ಎಂದು ಸಂಘ ಕಟುವಾಗಿ ಟೀಕಿಸಿದೆ.
ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗಾಗಿ ಮಂಜೂರಾದ 45,431 ಹುದ್ದೆಗಳಲ್ಲಿ 14,139 ಹುದ್ದೆಗಳು ಖಾಲಿ ಇದ್ದರೆ, ಪ್ರೌಢಶಾಲೆಗಳ 11,680 ಹುದ್ದೆಗಳಲ್ಲಿ 3,495 ಹುದ್ದೆಗಳು ಖಾಲಿ ಇರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲೆಯ ಒಟ್ಟು 2,078 ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆಯಿಂದ ಸಂಕಷ್ಟದಲ್ಲಿವೆ’ ಎಂದು ಆರೋಪಿಸಿದರು.
‘ಶಾಲಾ ಕಟ್ಟಡಗಳು ಜೀರ್ಣಾವಸ್ಥೆಗೆ ತಲುಪಿರುವುದು, ಮಳೆಗಾಲದಲ್ಲಿ ನೀರು ಸೋರಿಕೆ, ಸಮಯಕ್ಕೆ ಸರಿ ದುರಸ್ತಿ ಕೆಲಸಗಳು ನಡೆಯದಿರುವುದು, ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದಿರುವ ಬಗ್ಗೆ ರೈತ ಸಂಘ ತೀವ್ರ ಅಸಮಾಧಾನ’ ವ್ಯಕ್ತಪಡಿಸಿದರು.
‘ಚಿಂಚೋಳಿ ತಾಲೂಕಿನಲ್ಲಿ 2023–24ರಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರಿಗೆ ಎರಡು ವರ್ಷಗಳಿಂದ ವೇತನ ಬಾಕಿ ಉಳಿದಿದೆ. ಇಲಾಖೆಯ ಕೆಲ ಅಧಿಕಾರಿಗಳು ಕಾರಣವಿಲ್ಲದೆ ಕಡಬಡಿಸುತ್ತಿದ್ದು, 10 ಸಾವಿರ ರೂ. ಲಂಚ ಬೇಡಿ, ನೀಡದವರಿಗೆ ವೇತನ ನಿಲ್ಲಿಸಿರುವ ಗಂಭೀರ ಆರೋಪವನ್ನು ಸಂಘ ಮನವಿಯಲ್ಲಿ ಉಲ್ಲೇಖಿಸಿದೆ. ಸಂಬಂಧಿಸಿದ ಅಧಿಕಾರಿಗಳಾದ ಅಶೋಕ್ ಹೂವಿನಬಾವಿ, ನಿಜಮುನ್ನಿಸ್ಸ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು, ಸೇವೆಯಿಂದ ಅಮಾನತು ಮಾಡಿ ಪ್ರಕರಣ ದಾಖಲಿಸಬೇಕೆಂದು’ ಆಗ್ರಹಿಸಿದರು.
‘ಮ್ಯಾಗ್ನೆಟ್ ಶಾಲೆಗಳು, ಕೆಪಿಎಸ್ ಮಾದರಿಯಲ್ಲಿ 25 ಸಾವಿರ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿರುವುದು ಸರ್ಕಾರದ ಜನವಿರೋಧಿ ನೀತಿಯಾಗಿದೆ, ಸಂವಿಧಾನದ 21ಎ ಅಡಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಹಕ್ಕು ಜಾರಿಗೆ ಬರದಿರುವುದನ್ನು ರೈತ ಸಂಘ ವಿರೋಧಿಸಿದೆ. “ಸರ್ಕಾರಿ ಶಾಲೆಗಳೇ ಶಿಕ್ಷಣದ ಆಧಾರ ಸ್ತಂಭಗಳು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಬಲ್ಯಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಗಡಿ ಕಾಯುವ ಸೈನಿಕರು ದೇಶದ ಆಸ್ತಿ : ಪ್ರೊ. ಸಿದ್ದಪ್ಪ
‘ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲಿ ರಾಜ್ಯದ 41,905 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ 5ನೇ ತರಗತಿವರೆಗೆ ಸಿಬಿಎಸ್‌ಇ ದ್ವಿಭಾಷಾ ಶಿಕ್ಷಣ ಜಾರಿಗೆ ತರಬೇಕು, ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲಿ 6ರಿಂದ 12ನೇ ತರಗತಿವರೆಗೆ ನವೋದಯ ಮಾದರಿಯ ಸಿಬಿಎಸ್‌ಇ ವಸತಿ ಶಾಲೆ ಸ್ಥಾಪಿಸಬೇಕು, ಶಾಲಾ ವಿಲೀನ ನೀತಿ ತಕ್ಷಣ ಹಿಂಪಡೆಯಬೇಕು, ಅತಿಥಿ ಶಿಕ್ಷಕರ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಶಿಕ್ಷಕರ ಖಾಲಿ ಹುದ್ದೆಗಳನ್ನು ತುರ್ತುವಾಗಿ ಭರ್ತಿ ಮಾಡಬೇಕು’ ಎಂದು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಜಾಫರ್ ಖಾನ್, ದಿಲೀಪ್ ನಾಗೂರೆ, ರಾಯಪ್ಪಾ ಹುರುಮುಂಜ, ಸಿದ್ದು ಎಸ್ಎಲ್, ಕರೆಪ್ಪಾ ಕರಗೊಂಡ, ವಿರಣ್ಣಾ ಗಂಗಾಣಿ, ದೆವು ಬಿರದ್ದಾರ ಸೇರಿದಂತೆ ಅನೇಕರು ಭಾಗವಹಿಸಿದರು.





