ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಸರ್ಕಾರದ ನಿಯಮದ ನಡುವೆಯೇ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧರಿಸಿ ಸರ್ಕಾರಿ ವೈದ್ಯಾಧಿಕಾರಿಯೊಬ್ಬರು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.
ಆರ್‌ಎಸ್‌ಎಸ್ ಸ್ಥಾಪನೆಯ ಶತಮಾನೋತ್ಸವದ ಅಂಗವಾಗಿ ಈ ಪಥಸಂಚಲನವನ್ನು ಆಯೋಜಿಸಲಾಗಿದ್ದು, ಸೇಡಂ ತಾಲೂಕಿನ ಆಡಳಿತ ವೈದ್ಯಾಧಿಕಾರಿಯಾದ ನಾಗರಾಜ್ ಮನ್ನೆ ಅವರು ಆರ್‌ಎಸ್‌ಎಸ್ ಗಣವೇಷದಲ್ಲಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿರುವುದು ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿದ್ದೀರಾ? ಚಿತ್ತಾಪುರದಲ್ಲಿ RSS ಪಥಸಂಚಲನ; ಹೈಕೋರ್ಟ್ ನಿಜಕ್ಕೂ ಹೇಳಿದ್ದೇನು?
ಈ ಹಿಂದೆ ಅಕ್ಟೋಬರ್ 12ರಂದು ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಪಥಸಂಚಲನದಲ್ಲಿ ರೋಡಲಬಂಡಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಭಾಗವಹಿಸಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಸೇಡಂ ತಾಲೂಕಿನ ಆಡಳಿತ ವೈದ್ಯಾಧಿಕಾರಿಯ ಮೇಲೂ ಕ್ರಮ ಕೈಗೊಳ್ಳುವರೆಂಬ ಪ್ರಶ್ನೆ ಉದ್ಭವಿಸಿದೆ.





