ಗಂಡೋರಿ ನಾಲಾ ಯೋಜನೆ ಅಡಿಯಲ್ಲಿ ಮುಳುಗಡೆಯಾದ ಬೆಳಕೋಟಾ ಗ್ರಾಮದ ಪುನರ್ವಸತಿಯಲ್ಲಿನ ಖಾಲಿ ನಿವೇಶನಗಳ ಹಕ್ಕುಪತ್ರ ನಕಲು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಯ ಆಸ್ತಿ ಸಂಖ್ಯೆ 11-192ರಲ್ಲಿ ನಡೆಯುತ್ತಿರುವ ಗಜಾನನ ಟೈರ್ ಮೋಲ್ಡಿಂಗ್ ಕಂಪನಿಯ ಕಾಮಗಾರಿ ತಡೆಹಿಡಿಯುವಂತೆ ಪ್ರಜಾ ಪರಿವರ್ತನ ವೇದಿಕೆ ಕಲಬುರಗಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ ಅವರು, “ಕಮಲಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಂಡೋರಿ ನಾಲಾ ಯೋಜನೆ ಅಡಿಯಲ್ಲಿ ಬೆಳಕೋಟಾ ಗ್ರಾಮವು ಮುಳುಗಡೆಯಾಗಿತ್ತು. ಸದರಿ ಗ್ರಾಮದ ಪುನರ್ವಸತಿಯನ್ನು ಕಮಲಾಪುರದ ಬಳಿ ನೀಡಲಾಗಿದ್ದು, ಆ ಪುನರ್ವಸತಿಯಲ್ಲಿ ಮುಳುಗಡೆಯಾದ ಬೆಳಕೋಟ ಗ್ರಾಮದ ನಿರಾಶ್ರಿತರಿಗೆ ಖಾಲಿ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿದೆ. ಗ್ರಾಮದ ಬಹುತೇಕ ನಿವಾಸಿಗಳಿಗೆ ಇನ್ನೂ ಖಾಲಿ ನಿವೇಶನಗಳ ಹಕ್ಕುಪತ್ರ ನೀಡಿರುವುದಿಲ್ಲ. ಆದರೆ ಕೆಲವು ದುಷ್ಕರ್ಮಿಗಳು ಪುನರ್ವಸತಿಯಲ್ಲಿರುವ ಖಾಲಿ ನಿವೇಶನಗಳನ್ನು ನೋಡಿ ನಕಲಿ(ಜಾಲಿ) ಹಕ್ಕುಪತ್ರಗಳನ್ನು ತಯಾರಿಸಿ, ಪುನರ್ವಸತಿಯಲ್ಲಿ ಖಾಲಿ ಇರುವ ಖಾಲಿ ನಿವೇಶನಗಳ ಸಂಖ್ಯೆಯನ್ನು ಹಾಕಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜುಲೈ 10ರಂದು ದೂರು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸಿರುಲ್ಲ” ಎಂದು ಆರೋಪಿಸಿದರು.
“ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಬೇಕು. ಸಮಿತಿಯ ನೇತೃತ್ವದಲ್ಲಿ ನಕಲಿ(ಜಾಲಿ) ಹಕ್ಕು ಪತ್ರಗಳನ್ನು ತಯಾರಿಸಿದವರನ್ನು ತನಿಖೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಗಜಾನನ ಟೈರ್ ಮೋಲ್ಡಿಂಗ್ ಕಂಪನಿಯು ಮಾಡುತ್ತಿರುವ ಕಾಮಗಾರಿಯಿಂದ ಕಮಲಾಪುರದಲ್ಲಿನ ಪರಿಸರ ಹಾಳಾಗುತ್ತಿದೆ. ಈ ಕಂಪನಿಯು ಹಳೆ ಟೈರ್‌ಗಳನ್ನು ಸುಡುವುದರಿಂದ ಅದರಿಂದ ಬರುವ ಕೆಟ್ಟ ಹೊಗೆಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು, ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತಿದೆ” ಎಂದರು.
“ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಗಜಾನನ ಟೈರ್ ಮೋಲ್ಡಿಂಗ್ ಕಂಪನಿಯು ಮಾಡುವ ಕಾಮಗಾರಿಯನ್ನು ಕೂಡಲೇ ತಡೆಹಿಡಿಯಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಕಂಪೆನಿಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಬೇಕು. ಒಂದುವೇಳೆ ಈ ವಿಷಯಕ್ಕೆ ಸ್ಪಂದಿಸದಿದ್ದಲ್ಲಿ ನಮ್ಮ ಸಂಘಟನೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯದ ಆಸ್ತಿ ಕಬಳಿಕೆ ಆರೋಪ
ಈ ಸಂದರ್ಭದಲ್ಲಿ ರಮೇಶ್ ಆರ್ ಬೆಳಕೋಟಿ, ಅರುಣ್, ಆನಂದ ಸಿಂಗೆ, ಧರ್ಮಣ್ಣ, ಸಿದಪ್ಪ ನಾರಾಯಣಪುರ, ಅಜಾರೋದ್ದಿನ್, ಸಿದಪ್ಪ ಕೌನಳ್ಳಿ, ವಿಜಯಕುಮಾರ್ ಹೋಲ್ಕರ್ ಸೇರಿದಂತೆ ಇತರರು ಇದ್ದರು.





