ಮೈಕ್ರೊ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಬೇಕರಿ ಕಾರ್ಮಿಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಮೃತರ ಪತ್ನಿ ನಸೀಮಾ ಬೇಗಂ ನೀಡಿದ ದೂರಿನ ಅನ್ವಯ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಚಿಂಚೋಳಿ ತಾಲ್ಲೂಕಿನ ಸುಲೇಪೇಟದಲ್ಲಿ ಸಲೀಂ ಕಾಸಿಂ ಸಾಬ್ (46) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಸೇಡಂನವರಾದ ಸಲೀಂ ಹಲವಾರು ವರ್ಷಗಳಿಂದ ಸುಲೇಪೇಟದಲ್ಲಿಯೇ ನೆಲೆಸಿದ್ದರು. ಸುಮಾರು ₹20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ.
ಪರಿಹಾರಕ್ಕೆ ಆಗ್ರಹ:
ಸಲೀಂ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆದು ಸುಲೇಪೇಟದಲ್ಲಿ ಪ್ರತಿಭಟನೆ ನಡೆಸಿದರು.
ಮೃತನ ಕುಟುಂಬಕ್ಕೆ ₹1 ಕೋಟಿ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ಕಲಬುರಗಿ | ದಲಿತರಿಗೆ ಕ್ಷೌರ ಮಾಡಲು ನಕಾರ; ಕ್ಷೌರಿಕನ ವಿರುದ್ಧ ಜಾತಿ ದೌರ್ಜನ್ಯ ಪ್ರಕರಣ ದಾಖಲು
ಪ್ರತಿಭಟನೆಯಲ್ಲಿ ತಾಹೇರ್ ಪಟೇಲ್, ರಜಾಕ್ ಪಟೇಲ್, ಮೋಯಿನ್ ಮೋಮಿನ್, ನಸೀರ್ ಮದ್ದರಗಿ, ಲಾಡಲೆಸಾಬ್, ಫಾರುಕ್, ರುದ್ರಮುನಿ ರಾಮತೀರ್ಥಕರ್, ಮಲ್ಲಿಕಾರ್ಜುನ ಗುಲಗುಂಜಿ, ಫಕ್ರೊದ್ದಿನ್ ಚಾಂಗಲೇರಾ, ಮಹಮದ್ ಫಾಜಿಲ್, ನವಾಜ್ ಪಟೇಲ್ ಬುರಾನ ಪಟೇಲ್, ಜಮೀರ್ ಮಿಯಾ, ರಸೂಲ್ ಮೊದಲಾದವರು ಇದ್ದರು.





