ಜಿಲ್ಲೆಯ ಕಾಳಗಿ ತಾಲ್ಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ಟೈಲರ್ ಅಂಗಡಿ ಬಳಿಯ ಬಟ್ಟೆಗಳ ಚಿಂದಿಯಲ್ಲಿ ನಾಡ್‌ಪಿಸ್ತೂಲ್ ಹಾಗೂ ಒಂದು ಜೀವಂತ ಮತ್ತು ಎರಡು ನಿಷ್ಕ್ರಿಯ ಗುಂಡುಗಳು ಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಟೇಲರ್ ಮಾಳಪ್ಪ ಹೂಗೊಂಡ ಅವರು ಅಂಗಡಿಯ ಕಸವನ್ನು ಗುಡಿಸಿ, ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಕಸಕ್ಕೆ ಬೆಂಕಿ ಹಚ್ಚಿದ ವೇಳೆ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಜೋರಾದ ಸ್ಫೋಟ ಶಬ್ದ ಕೇಳಿ ಆತಂಕಗೊಂಡ ಅವರು ಬೆಂಕಿ ನಂದಿಸಿ ಪರಿಶೀಲಿಸಿದಾಗ ಕಸದೊಳಗೆ ನಾಡ್‌ಪಿಸ್ತೂಲ್ ಮತ್ತು ಮೂರು ಗುಂಡುಗಳು ಪತ್ತೆಯಾಗಿವೆ. ತಕ್ಷಣವೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ | ದೀಪಾವಳಿ ಪ್ರಯುಕ್ತ ಕೆಕೆಆರ್‌ಟಿಸಿಯಿಂದ 600 ಹೆಚ್ಚುವರಿ ಬಸ್: ಡಾ.ಬಿ.ಸುಶೀಲಾ
ಈ ಕುರಿತು ಈದಿನ.ಕಾಮ್ ಜತೆ ಮಾತನಾಡಿದ ಪಿಎಸ್‌ಐ ತಿಮ್ಮಯ್ಯ ಅವರು, “ಘಟನೆ ಕುರಿತು ಎಫ್ಐಆರ್ ದಾಖಲಾಗಿದೆ. ನಾನು ನಿನ್ನೆ ರಜೆಯಲ್ಲಿ ಇದ್ದುದರಿಂದ ಕಾಳಗಿ ವೃತ್ತದ ಡಿವೈಎಸ್‌ಪಿ ಶಂಕರ್ ಗೌಡ ಪಾಟೀಲ್ ಹಾಗೂ ಸಿಪಿಐ ಜಗದೇವಪ್ಪ ಪಾಳ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ,” ಎಂದು ಮಾಹಿತಿ ನೀಡಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





