ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರೊ. ಮೊಗಳ್ಳಿ ಗಣೇಶ ನುಡಿನಮನ ಕಾರ್ಯಕ್ರಮವನ್ನು ಗುರುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಾಭ ಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಅರಣುಕುಮಾರ್ ಜೋಳದಕೂಡ್ಲಿಗಿ ಮಾತನಾಡಿ, ‘ಪ್ರೊ. ಮೊಗಳ್ಳಿ ಗಣೇಶ ಅವರು ವೈರುಧ್ಯಪೂರ್ಣ ವ್ಯಕ್ತಿತ್ವದ ಜೊತೆಗೆ ಜೀವಂತ ಚಿಂತನೆಯುಳ್ಳ ಬರಹಗಾರರಾಗಿದ್ದರು. ಅವರ ಕತೆಗಳಲ್ಲಿ ಬಾಲ್ಯದ ನೋವು, ದಲಿತ ಸಮುದಾಯದ ಅನುಭವಗಳು ಹಾಗೂ ಸಾಮಾಜಿಕ ಅಸಮಾನತೆಗಳ ನೈಜ ಚಿತ್ರಣ ಅವರ ಕಥೆಗಳಲ್ಲಿ ಕಂಡುಬರುತ್ತದೆ’ ಎಂದು ಹೇಳಿದರು.
ಅವರು ಮುಂದುವರಿಸಿ, “ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊಗಳ್ಳಿ ಗಣೇಶರು ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಅವರ ಕಥೆಗಳು ಕಲ್ಪನಾಶಕ್ತಿ ಮತ್ತು ಸಾಮಾಜಿಕ ವಾಸ್ತವದ ಸಂಯೋಜನೆಯಿಂದ ವಿಶಿಷ್ಟತೆ ಪಡೆದಿವೆ,” ಎಂದು ಅಭಿಪ್ರಾಯಪಟ್ಟರು.
‘ಬೊರಗಿ’ ಸೇರಿದಂತೆ ಮೊಗಳ್ಳಿಯವರ ಅನೇಕ ಕೃತಿಗಳು ಸಮಾಜದ ನೈಜ ಬದುಕಿನ ಕಥೆಯನ್ನು ಹೇಳುತ್ತವೆ. ಅವರು ಸಂಶೋಧಕ, ಚಿಂತಕ ಮತ್ತು ಸಂಸ್ಕೃತಿ ವಿಶ್ಲೇಷಕ (ಕಲ್ಚರಲ್ ತಿಂಕರ್) ಆಗಿ ಹೊಸ ಸಾಹಿತ್ಯ ದೃಷ್ಟಿಕೋನವನ್ನು ನೀಡಿದರು. ‘ಗೋವು ಬ್ರಾಹ್ಮಣ ಸಂಕೇತ, ಹುಲಿ ದಲಿತರ ಸಂಕೇತ’ ಎಂದು ಅವರ ವಿಶ್ಲೇಷಣೆ ಕನ್ನಡ ಚಿಂತನೆಗೆ ಹೊಸ ಆಯಾಮ ನೀಡಿತು. ಅವರ ಕೆಲವು ಕೃತಿಗಳು ಇಂಗ್ಲಿಷ್‌ನಲ್ಲಿಯೂ ಅನುವಾದಗೊಂಡಿವೆ,’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | 69ನೇ ಧಮ್ಮಚಕ್ರ ಪ್ರವರ್ತನಾ ದಿನಾಚರಣೆ
‘ಮೊಗಳ್ಳಿಯವರು ಮೇಲ್ಜಾತಿ ಕಥೆಗಳ ಏಕಾಧಿಪತ್ಯ ಮುರಿದು, ದಲಿತ ಕಥನಗಳಿಗೆ ಸಾಹಿತ್ಯದಲ್ಲಿ ಕೇಂದ್ರ ಸ್ಥಾನ ನೀಡಿದರು. ಕನ್ನಡ ವಿಮರ್ಶೆಗೆ ಹೊಸ ಚೈತನ್ಯ ತುಂಬಿದರು. ಅವರು ಈಗ ನಮ್ಮ ನಡುವೆ ಇಲ್ಲದಿದ್ದರೂ, ಅವರ ಬರಹಗಳು ಮತ್ತು ಚಿಂತನೆಗಳು ಸದಾ ಜೀವಂತವಾಗಿವೆ,’ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಮುಖಂಡ ಮರೆಪ್ಪ ಹಳ್ಳಿ, ಪ್ರೊ. ಆರ್.ಕೆ. ಹುಡಗಿ, ಪ್ರೊ. ಜಯದೇವ ಗಾಯಕವಾಡ್, ಪ್ರೊ. ಅಪ್ಪುಗಿರಿ ಸೋಮಶೇಖರ್, ರೇಣುಕಾ ಸಿಂಗೆ, ಸುರೇಶ ಹಾದಿಮನಿ, ಸಂಜಯ್ ಮ್ಯಾಕಲ್, ದತ್ತಾತ್ರೇಯ ಇಕ್ಕಳಕಿ, ಅಶ್ವಿನಿ ಮದನಕರ್, ದಿಲಿಪ್ ಕಾಯಂಕರ್, ಡಾ. ಮಾಹೇಶ ಕುಮಾರ್ ರಾಠೋಡ್, ರಾಜಕುಮಾರ ಮಾಳಗೆ, ಸಿದ್ದಪ್ಪ ಹೊಸಮನಿ, ಡಾ. ನಂದುಕುಮಾರ್ ಸೇರಿದಂತೆ ಪ್ರಗತಿಪರ ಚಿಂತಕರು, ಬಂಡಾಯ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.





