ಕಲಬುರಗಿ ಜಿಲ್ಲಾದ್ಯಂತ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ಮೂರು ಹಂತದ ವಿದ್ಯುತ್ ನೀಡುವುದನ್ನು ಕೈಬಿಟ್ಟು ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಬೇಕು. ಟ್ರಾನ್ಸ್‌ಫಾರ್ಮರ್ ಸುಟ್ಟುಹೋದ ಕೂಡಲೇ ಟಿಸಿ ಅಳವಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪರಾಂತ ರೈತ ಸಂಘದಿಂದ ಕಲಬುರಗಿ ಜೆಸ್ಕಾಂ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಪ್ರತಿಭಟನಾಕಾರರು ಮಾತನಾಡಿದ್ದು, “ಜೋತುಬಿದ್ದ ವೈರ್‌ಗಳನ್ನು ಸರಿಪಡಿಸಬೇಕು. ಜೋತುಬಿದ್ದ ವೈರ್‌ಗಳಿಂದ ಹಾನಿಯಾದ ಬೆಳೆ ಸುಟ್ಟಿರುವ ಕಬ್ಬು ಬೆಳೆಗೆ ಪರಿಹಾರ ನೀಡಬೇಕು. ವಿದ್ಯುತ್ ಖಾಸಗೀಕರಣವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಕೃಷಿ ಈಗಾಗಲೇ ನಷ್ಟದಲ್ಲಿ ನಡೆಯುತ್ತಿದೆ. ಕೃಷಿ ಲಾಗ್ವಾಡುಗಳ ದುಬಾರಿ ವೆಚ್ಚದಿಂದಾಗಿ, ಪ್ರತಿಯೊಂದು ರೈತ ಕುಟುಂಬವೂ ಕೂಡ ಅಪಾರ ಸಾಲ-ಸಂಕಟವನ್ನು ಅನುಭವಿಸುತ್ತಿದೆ. ದೇಶ ಹಾಗೂ ರಾಜ್ಯದ ಆಹಾರ ಭದ್ರತೆ, ಸ್ವಾವಲಂಬನೆಗೆ ಇಷ್ಟೆಲ್ಲ ಸಂಕಟಗಳ ನಡುವೆ ಶ್ರಮಿಸುತ್ತಿರುವ ರೈತರನ್ನು ಮತ್ತಷ್ಟು ಸಂಕಟಕ್ಕೆ ತಳ್ಳುವ ಕ್ರಮಗಳು ರೈತ ಸಮುದಾಯದ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತವೆ. ಭೂಮಿ, ನೀರು ಮತ್ತು ಆಹಾರ ರೈತರ ಮೂಲಭೂತ ಅವಶ್ಯಕತೆಯಾಗಿದೆ. ಇಂತಹ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಇರುವ ಸರ್ಕಾರಗಳು ತಮ್ಮ ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತಿಲ್ಲ. ಜೀವನ ವೆಚ್ಚ ಮತ್ತು ಬೇಸಾಯದ ವೆಚ್ಚದ ಅಧಿಕ ಭಾರದಿಂದ ನರಳುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಇಂತಹ ನಿರ್ಧಾರಗಳನ್ನು ವಿದ್ಯುತ್ ಖಾಸಗೀಕರಣವನ್ನು ಕೂಡಲೇ ಕೈ ಬಿಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಕಲಬುರಗಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
“ವಿದ್ಯುತ್ ರಂಗವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಕರಾಳ ವಿದ್ಯುತ್ ತಿದ್ದುಪಡಿ ಕಾಯ್ದೆ 2022, ರೈತರ ಪ್ರಬಲ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಮಂಡನೆಯಾಗಿದೆ. ಇದು ಸಂಸತ್ತಿನಲ್ಲಿ ಅಂಗೀಕಾರ ಆಗುವ ಮುನ್ನವೇ ಇಂತಹ ರೈತ ವಿರೋಧಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡುವ ಪ್ರಯತ್ನವು ಕಾನೂನಿನ ಆಳ್ವಿಕೆಯ ಅಣಕವಾಗಿದೆ. ಈ ಕರಾಳ ಕಾಯ್ದೆಯ ಸೆಕ್ಷನ್ 65 ಹಾಗೂ 66, ಉಚಿತ ಹಾಗೂ ಸಬ್ಸಿಡಿ ದರದಲ್ಲಿ ವಿದ್ಯುತ್ ವಿತರಣೆಯನ್ನು ನಿರ್ಬಂಧಿಸಿದೆ. ಎಲ್ಲ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಸೂಲಿ ಮಾಡಲು ವಿದ್ಯುತ್ ವಿತರಣಾ ಕಂಪನಿಗಳಿಗೆ ಈ ತಿದ್ದುಪಡಿ ಕಾಯ್ದೆ ಅಧಿಕಾರ ನೀಡುತ್ತದೆ. ಇಂತಹ ಕರಾಳ ಕಾಯ್ದೆಯನ್ನು ರಾಜ್ಯ ಸರ್ಕಾರ, ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ಮುಂತಾದ ರಾಜ್ಯಗಳ ಮಾದರಿಯಲ್ಲಿ ವಿರೋಧಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯ ಉದ್ದೇಶವು, ನೇರ ನಗದು ವರ್ಗಾವಣೆ(DBT) ವ್ಯಾಪ್ತಿಗೆ ಕೃಷಿ ಪಂಪ್‌ಸೆಟ್‌ಗಳನ್ನು ಒಳಪಡಿಸಬೇಕಾದ ಕರಾಳ ಕಾಯ್ದೆಯ ಅಗತ್ಯವನ್ನು ಪೂರೈಸುವ ದುರುದ್ದೇಶವನ್ನು ಹೊಂದಿದೆ. ಈಗಾಗಲೇ ಅಡುಗೆ ಅನಿಲ ಸಬ್ಸಿಡಿ ವಿಷಯದಲ್ಲಾದಂತೆ ಕೃಷಿ ಪಂಪ್‌ಸೆಟ್‌ಗಳಿಗೂ ಆಗುತ್ತದೆ. ಒಕ್ಕೂಟ ಸರ್ಕಾರದ ತೆರಿಗೆ ನೀತಿಯಿಂದಾಗಿ ಆದಾಯ ನಷ್ಟ ಅನುಭವಿಸುತ್ತಿರುವ ರಾಜ್ಯಗಳ ಮೇಲೆ ನೇರ ನಗದು ವರ್ಗಾವಣೆ ಹೊರೆ ಹಾಕುವುದನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಬಾರದು. ಈಗ ಇರುವಂತೆ ಹತ್ತು ಎಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಮುಂದುವರೆಸಬೇಕು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ರೈತಾಪಿ ಕೃಷಿಯನ್ನು ನಾಶಮಾಡುವ ಕೆಇಆರ್‌ಸಿಯ ರೈತ ವಿರೋಧಿ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯುವಂತೆ ಮಾಡಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು” ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ ಕೈ ಬಿಡಬೇಕು, 2022 ವಿದ್ಯುತ್ ಮಸೂದೆ ಹಿಂಪಡಿಯಬೇಕು. ಪಂಪ್‌ಸೆಟ್ ಅಕ್ರಮ ಸಕ್ರಮ ಕೈ ಬಿಟ್ಟು ರೈತ ವಿರೋಧಿ ನೀತಿ ಜಾರಿಗೆ ತಂದ ಸರ್ಕಾರದ ನೀತಿ ಹಿಂಪಡೆಯಬೇಕು. ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕುವುದನ್ನು ತಡೆಗಟ್ಟಬೇಕು. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ರೈತರ 436031 ಪಂಪ್‌ಸೆಟ್, 88016 ಪಂಪ್‌ಸೆಟ್ ಟಿಸಿಗಳಿಗೆ ಲೋಡ್ ಜಾಸ್ತಿಯಾಗಿ ಪದೇಪದೆ ಸುಡುತ್ತಿವೆ. ಹಾಗಾಗಿ ಹೆಚ್ಚುವರಿ ಟಿಸಿ ಕೂಡಿಸಬೇಕು” ಎಂದು ಆಗ್ರಹಿಸಿದರು.
“ಬೆಲೆ ಏರಿಕೆಯು ವಾಣಿಜ್ಯಕ್ಕಾಗಿ ಬಳಸುವವರ ಮೂಲಕ ಜನ ಸಾಮಾನ್ಯರು ಬಳಸುವ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಹಾಗೂ ಸಾವಿರಾರು ಸಣ್ಣ ಕೈಗಾರಿಕೆಗಳ ಮುಚ್ಚುವಿಕೆಗೆ, ಅಲ್ಲಿ ದುಡಿಯುವ ದಶ ಸಾವಿರಗಟ್ಟಲೇ ಕಾರ್ಮಿಕರ ಕುಟುಂಬಗಳನ್ನು ಬೀದಿಪಾಲು ಮಾಡಲು ಕಾರಣವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಸಂಸದಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ
1) ಕಾಳಗಿ ತಾಲೂಕಿನ ಗೈ ಪಿರ್ ದರ್ಗಾ ಟಿಸಿ ಸುಟ್ಟಿದ್ದು ಕೂಡಲೇ ಹೊಸ ಟಿಸಿ ಅಳವಡಿಸಬೇಕು.
2) ಕಾಳಗಿ ತಾಲುಕಿನ ಚಿಂಚೊಳಿ ಎಚ್ ತಾಂಡಾದಿಂದ ಹುಳಿಗೆರಾ ಗ್ರಾಮದ ರೈತರು ಹೆಚ್ಚುವರಿ ಟಿಸಿ ಕಂಬಗಳು, ಎರಡು ಟಿಸಿ ಕನೆಕ್ಷನ್ ಕೂಡಿ ಒಂದೇ ಟಿಸಿ ಅಳವಡಿಸಿರುವುದರಿಂದ ಟಿಸಿ ಸುಡುತ್ತಿದೆ. ಕೂಡಲೇ ಟಿಸಿ ಅಳವಡಿಸಬೇಕು.
3) ಬೆನೂರು ಟಿಸಿ ಸುಟ್ಟಿದೆ. ಅದನ್ನೂ ಅಳವಡಿಸಬೇಕು.
4) ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ನಿಂಗಪ್ಪಾ ಪೂಜಾರಿ RRNo 44 ಇದ್ದು, ಕಂಬ, ವೈರ್ ಹಾಗೂ ಟಿಸಿ ಅಳವಡಿಸಬೇಕು.
5) ಜೇವರ್ಗಿ ತಾಲೂಕಿನ ಅಂಕಲಗಿ ಮತ್ತು ನೆಲೊಗಿ ಗ್ರಾಮಗಳಲ್ಲಿಗಳಲ್ಲಿ ಖಾಯಂ SO ನೇಮಿಸಬೇಕು
6) ಕಾಳಗಿ ತಾಲೂಕಿನ ಅರಕಲ್ ಗ್ರಾಮದಲ್ಲಿ ಗೈ ಪಿರ್ ದರ್ಗಾ ಹತ್ತಿರ ಟಿಸಿ ಅಳವಡಿಸಬೇಕು.
7) ಕಾಳಗಿ ತಾಲುಕಿನ ಹುಳಿಗೆರಾ ಲೈನ್‌ಮ್ಯಾನ್ ಕಂಬ ಹೇರಲು ಬರುವುದಿಲ್ಲ. ಆದಕಾರಣ ಖಾಯಂ ಲೈನ್‌ಮ್ಯಾನ್ ನೇಮಕಾತಿ ಮಾಡಬೇಕು.
8) ಹೆಬ್ಬಾಳ ಚಿಂಚೊಳಿಯಿಂದ ತೋಟದ ವಿದ್ಯುತ್ ಸಂಪರ್ಕವನ್ನು ಹುಳಿಗಾರ ಪಂಪ್‌ಸೆಟ್ ರೈತರಿಗೆ ಒದಗಿಸಬೇಕು.
9) ಹುಳಿಗೆರಾ ಗ್ರಾಮದಲ್ಲಿ ಪೆದ್ದಿ ಹೊಲದಲ್ಲಿ ಹೆಚ್ಚುವರಿ ಟಿಸಿ ಅಳವಡಿಸಬೇಕು.
ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಹ ಕಾರ್ಯದರ್ಶಿ ದಿಲೀಪ್ ಕುಮಾರ್ ನಾಗೂರೆ, ಉಪಾಧ್ಯಕ್ಷರಾದ ಸಿದ್ದಪ್ಪಾ ಕಲಸೆಟ್ಟಿ, ಚಂದಪ್ಪಾ ಪೂಜಾರಿ, ಯುವ ಘಟಕ ಕಾರ್ಯದರ್ಶಿ ಕರೆಪ್ಪಾ ಕರಗೊಂಡ, ಕೆಪಿಆರ್‌ಎಸ್ ಕಾರ್ಯದರ್ಶಿ ಸಿದ್ದು ಎಸ್ ಎಲ್ ಇದ್ದರು.





