ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯವನ್ನು ಖಂಡಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಮಂಗಳವಾರ ನಗರದ ತಿಮ್ಮಪುರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಾರ್ಯದರ್ಶಿ ಕೆ ನೀಲಾ ಮಾತನಾಡಿ, “ಸಿಜೆಐ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲೇ ಶೂ ಎಸೆದಿರುವ ಘಟನೆ ಅತ್ಯಂತ ಆಘಾತಕಾರಿ ಹಾಗೂ ಶೋಚನೀಯ ಘಟನೆಯಾಗಿದೆ. ಇದು ಖಂಡನಾರ್ಹ” ಎಂದರು.
“ಆರೋಪಿಯು ಸನಾತನ ಧರ್ಮ ಬೆಂಬಲಿಸುವ ಘೋಷಣೆಗಳನ್ನು ಕೂಗಿರುವುದು ಜಾತಿವಾದಿ ಮನೋಭಾವದ ಸ್ಪಷ್ಟ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ನಾಯಕರಿಂದ ಬಂದಿರುವ ಜಾತಿ ಮತ್ತು ಕೋಮುವಾದಿ ಹೇಳಿಕೆಗಳು ಇಂತಹ ದುಷ್ಕೃತ್ಯಗಳಿಗೆ ಧೈರ್ಯ ತುಂಬಿವೆ” ಎಂದು ಆರೋಪಿಸಿದರು.
“ಈ ಘಟನೆ ಹಿಂದುತ್ವ ಕೋಮುವಾದಿ ಶಕ್ತಿಗಳು ಸಮಾಜಕ್ಕೆ ಮನುವಾದಿ ಮತ್ತು ಕೋಮು ವಿಷವನ್ನು ತುಂಬುತ್ತಿರುವ ಮತ್ತೊಂದು ಉದಾಹರಣೆ. ಇದು ಸಂಘ ಪರಿವಾರದ ಅಸಹಿಷ್ಣುತೆಯ ನಿಜರೂಪವನ್ನು ಬಯಲಿಗೆಳೆಯುತ್ತಿದೆ. ತಮ್ಮ ಸಿದ್ಧಾಂತಕ್ಕೆ ಹೊಂದದ ಧ್ವನಿಯನ್ನು ಸಹಿಸಿಕೊಳ್ಳದ ಮನೋಭಾವದಿಂದ ಪ್ರಜಾಪ್ರಭುತ್ವದ ಮೂಲ ಅಂಶವೇ ಅಪಾಯಕ್ಕೊಳಗಾಗಿದೆ” ಎಂದು ಹೇಳಿದರು.
“ಸಿಜೆಐ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ಭದ್ರತೆ ಒದಗಿಸಬೇಕು. ಅಸಹಿಷ್ಣುತೆಯನ್ನು ಉತ್ತೇಜಿಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸಾಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಲಿತ ಶಿಕ್ಷಕಿ ಕುಳಿತ ಕುರ್ಚಿಗಳನ್ನು ಸ್ವಚ್ಛಗೊಳಿಸಿದ ಸವರ್ಣೀಯರು; ಸಮೀಕ್ಷೆಯಲ್ಲಿ ಅಸ್ಪೃಶ್ಯತೆಯ ಕಹಿ ಅನುಭವಗಳು
ಈ ಸಂದರ್ಭದಲ್ಲಿ ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಾರ್ಯದರ್ಶಿ ಕೆ ನೀಲಾ, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಸುಧಾಮ ಧನ್ನಿ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಚಂದಮ್ಮ ಗೋಳಾ, ಪಾಂಡುರಂಗ ಮಾವಿನಕರ, ಡಿವೈಎಫ್ಐ ಅಧ್ಯಕ್ಷ ಲವಿತ್ರ ವಸ್ತ್ರದ, ಡಾ. ಪ್ರಭು ಖಾನಾಪುರೆ, ಸಿಐಟಿಯು ಅಧ್ಯಕ್ಷೆ ಶಾಂತಾ ಘಂಟಿ, ಕೋದಂಡರಾಮಪ್ಪ, ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸರ್ವೇಶ, ಇಮಾಮ್, ಕೈಲಾಶ, ಸಿದ್ದಪ್ಪ ಹೊಸಮನಿ, ಶಾಂತೇಶ ಹಾಗೂ ಮಲ್ಲಿಕಾರ್ಜುನ ಕಿಣ್ಣಿಸುಲ್ತಾನ್ ಇದ್ದರು.





