ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಡಾ. ಹ.ರಾ.ಮಹೇಶ ಅವರಿಗೆ ತಮ್ಮ ವೃತ್ತಿ ಬದುಕಿಗೆ ಸ್ವಯಂ ನಿವೃತ್ತಿ ಘೋಷಿಸಿದ ಹಿನ್ನೆಲೆ ನಗರದಲ್ಲಿ ಭಾನುವಾರ ಅಭಿನಂದನಾ ಸಮಾರಂಭ ನಡೆಯಿತು.
ಹ.ರಾ.ಮಹೇಶ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ʼಪ್ರಸ್ತುತ ಸಮಾಜದಲ್ಲಿ ಯುವ ಜನಾಂಗ, ವಿದ್ಯಾರ್ಥಿ, ಸಮುದಾಯ, ಮಹಿಳಾ ಸಮುದಾಯದ ಅನೇಕ ಸಮಸ್ಯೆಗಳು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ’ ಎಂದು ತಿಳಿಸಿದರು.
‘ಸಂವಿಧಾನ ಜಾರಿಯಾಗಿ 76 ವರ್ಷ ಕಳೆದರೂ ಸಮಾಜದಲ್ಲಿ ಬೇರೂರಿರುವ ಬಡತನ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯಗಳಿಗೆ ಮುಕ್ತಿ ಸಿಕ್ಕಿಲ್ಲ. ನಮ್ಮನ್ನಾಳುವ ಸರ್ಕಾರಗಳು ಸಂವಿಧಾನ ಬದ್ಧವಾಗಿ ಆಡಳಿತ ನೀಡದ ಕಾರಣಕ್ಕೆ ದೇಶದಲ್ಲಿ ಹಲವು ಸಮಸ್ಯೆಗಳು ಕಾಡುತ್ತಿವೆ. ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ, ಅಸಮಾನತೆ ತೊಲಗಿಸಬೇಕಾದರೆ ಸಂವಿಧಾನ ಬದ್ಧವಾಗಿ ಆಡಳಿತ ಮಾಡುವ ಬಹುಜನ ಸಮಾಜ ಪಕ್ಷಕ್ಕೆ ನಾವೆಲ್ಲರೂ ಬಲ ನೀಡಬೇಕಾಗಿದೆ’ ಎಂದು ಹೇಳಿದರು.
‘ಬಹುಜನ ಚಳುವಳಿ ಇನ್ನು ಸಕ್ರಿಯವಾಗಿ, ಬಲವಾಗಿ ಕಾರ್ಯನಿರ್ವಹಿಸಬೇಕಾದರೆ ನೌಕರರು, ವಿದ್ಯಾವಂತರು ಚಳುವಳಿಗಾಗಿ ತ್ಯಾಗ ಮನೋಭಾವ ಅಳವಡಿಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಬಿಎಸ್ಪಿ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ನನ್ನದಾಗಿದೆʼ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಲ್.ಆರ್.ಭೋಸಲೆ, ಮಹದೇವ ಧನ್ನಿ, ತಿಪ್ಪಣ್ಣ ಕಿನ್ನೂರು, ಮೈಲಾರಿ ಸೆಳ್ಳಗಿ, ಹುಚ್ಚಪ್ಪ ವಟ್ಟರ್, ಡಾ.ಅನಿಲ ಟೆಂಗಳಿ, ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಆನಂದ ಮಸ್ಕಿ, ಶಿವಲೀಲಾ ಪಾಟೀಲ್ ಹಡಗಿಲ್, ಪ್ರಿಯಾಂಕಾ ಜಮಾದಾರ್, ಮಾಶಾಕ್ ಪಟೇಲ್ ಹಾಗೂ ಸಾಮಾಜಿಕ ಚಿಂತಕರು, ಕಾರ್ಯಕರ್ತರು ಭಾಗವಹಿಸಿದರು.
ರಾಜ್ಯದಲ್ಲಿ ಬಿಎಸ್ಪಿ ಅಧಿಕಾರಕ್ಕೆ ತರುವ ಪ್ರಯತ್ನ ನನ್ನದು :
ಭಾರತೀಯ ಸಂವಿಧಾನದ ಆಶಯಗಳನ್ನು ಚಳವಳಿಯ ಮೂಲಕ ಜನರಿಗೆ ತಲುಪಿಸುವ ಮೂಲ ಉದ್ದೇಶದಿಂದ ನನ್ನ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಹುಜನ ಪಕ್ಷ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆʼ ಎಂದು ಸಾಮಾಜಿಕ ಚಿಂತಕ ಹ.ರಾ.ಮಹೇಶ ಹೇಳಿದರು.
ಉಪನ್ಯಾಸಕ ವೃತ್ತಿಗೆ ಸ್ವಯಂ ನಿವೃತ್ತಿ ಘೋಷಿಸಿ ಸಾಮಾಜಿಕ ಚಳುವಳಿಗಾಗಿ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಲು ಪಣತೊಟ್ಟಿರುವ ಹ.ರಾ.ಮಹೇಶ ಅವರಿಗೆ ಶನಿವಾರ ಬೀದರ್‌ನಲ್ಲಿ ಜಿಲ್ಲಾ ಮೂಲಭಾರತೀಯ ಸಮಾಜದ ನೌಕರರ ವತಿಯಿಂದ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಗೌತಮ್ ಬುದ್ಧರ ಧಮ್ಮ ಚಿಂತನೆ ಬಿತ್ತುವುದು ಅತ್ಯಂತ ಅಗತ್ಯವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ವಂಚಿತರಾಗುತ್ತಿರುವ ಸಮುದಾಯಗಳನ್ನು ಮೇಲೆತ್ತುವ ಪ್ರಯತ್ನಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ಈ ದಿಸೆಯಲ್ಲಿ ಬದುಕು ಪೂರ್ತಿ ಚಳವಳಿಗಾಗಿ ಶ್ರಮಿಸಲು ಹೊರಟಿರುವ ನನಗೆ ಎಲ್ಲರ ಸಹಕಾರ ಅಗತ್ಯವಿದೆʼ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಠಲದಾಸ್ ಪ್ಯಾಗೆ, ಪ್ರೇಮಸಾಗರ್ ದಾಂಡೇಕರ್, ರಾಜಕುಮಾರ ಗುನ್ನಳ್ಳಿ, ಶ್ಯಾಮಸುಂದರ್ ಖಾನಾಪುರಕರ, ಸುಮಂತ ಕಟ್ಟಿಮನಿ, ಸೂರ್ಯಕಾಂತ ಸಿಂಗೆ, ಮಹೇಶ ಗೊರನಾಳಕರ್, ಟಿ.ಆರ್.ದೊಡ್ಡೆ, ಮಹಾದೇವ ಕಾಂಬಳೆ, ಪಾಂಡುರಂಗ ಬೆಲ್ದಾರ್ ಸೇರಿದಂತೆ ಸಾಮಾಜಿಕ ಚಿಂತಕರು, ಹೋರಾಟಗಾರರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಕರ್ತವ್ಯ ಲೋಪ, ನಿರ್ಲಕ್ಷ್ಯತನ : ವೈದ್ಯೆ ಅಮಾನತು





