ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾರತೀಯ ಸೈನ್ಯಕ್ಕೆ ಕ್ರೀಡಾ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪವನ್ ಬಲಿರಾಮ ಚವ್ಹಾಣ್ ಅವರನ್ನು ಗುರುವಾರ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ಪ್ರೊ.ಸಿದ್ದಪ್ಪ ಎಸ್. ಕಾಂತ ಅವರು ಮಾತನಾಡಿ, ‘ದೇಶದ ಗಡಿ ಕಾಯುವ ಸೈನಿಕರೇ ದೇಶದ ಆಸ್ತಿ. ಸೈನಿಕನಾಗಿ ದೇಶ ಸೇವೆ ಮಾಡಲು ಅವಕಾಶ ಸಿಗುವುದು ಅಪರೂಪ. ಇಂತಹ ಹುದ್ದೆಗೆ ಆಯ್ಕೆಯಾಗಲು ಸದೃಢ ದೇಹ ಮತ್ತು ಸದೃಢ ಮನೋಬಲ ಅಗತ್ಯ. ಪವನ್ ತಮ್ಮ ಪರಿಶ್ರಮದಿಂದ ಈ ಸಾಧನೆ ಮಾಡಿದ್ದು, ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಆಗಿದ್ದಾರೆʼ ಎಂದು ತಿಳಿಸಿದರು.
ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಕರಿಬಸಪ್ಪ ಮಾತನಾಡಿ, ‘ಕ್ರೀಡೆ ಉದ್ಯೋಗ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪವನ್ ಅವರ ಆಯ್ಕೆಯೇ ಇದಕ್ಕೆ ಮುಖ್ಯ ಉದಾಹರಣೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಿಗೆ ತೊಡಗಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಪವನ್ ಬಲಿರಾಮ ಚವ್ಹಾಣ್ ಮಾತನಾಡಿ, ‘ಬಡತನದ ಹಿನ್ನಲೆ, ಪರಿಶ್ರಮ ಮತ್ತು ಅಧ್ಯಾಪಕರ ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ’ ಎಂದು ತಿಳಿಸಿ ಕಾಲೇಜಿಗೆ ಕೃತಜ್ಞತೆ ಸಲ್ಲಿಸಿದರು.
ಇದ್ದನ್ನು ಓದಿದ್ದೀರಾ? ಕಲಬುರಗಿ | ಸಿಪಿಐ ಮಹಾದೇವ ದಿಡಿಮನಿಗೆ ‘ಉತ್ತಮ ಸರ್ಕಲ್’ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಸಿದ್ದಾರ್ಥ ಮದನಕರ್, ಪ್ರಾಧ್ಯಾಪಕರಾದ ಡಾ.ಸುದರ್ಶನ್ ಮದನಕರ್, ಡಾ. ಅರುಣ್ ಜೋಳದಕೂಡ್ಲಿಗಿ, ಡಾ.ನಿರ್ಮಲ ಸಿರಗಾಪುರ, ಡಾ. ವಸಂತ ನಾಸಿ, ಡಾ.ದತ್ತೂರಾಯ ಹಾಗೂ ಡಾ. ಶಿವಕುಮಾರ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪಂಡಿತ ಮದನಕರ್ ನಿರೂಪಿಸಿದರು.





